ಶಿವಮೊಗ್ಗ: ಇಂಡಿಗೋ ಏರ್‌ಲೈನ್ಸ್ ವಿಮಾನಯಾನ ಸೇವೆ ಸ್ಥಗಿತಗೊಂಡ ಬೆನ್ನಲ್ಲೇ, ಶಿವಮೊಗ್ಗಕ್ಕೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನಯಾನ ಸೇವೆಯೂ ರದ್ದಾಗಿದೆ. ಇದರೊಂದಿಗೆ ಸಂಸ್ಥೆಯು ತನ್ನ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಕೂಡ ಸ್ಥಗಿತಗೊಳಿಸಿದೆ.
ಸ್ಪೈಸ್ ಜೆಟ್ ಸಂಸ್ಥೆಯು ಚೆನ್ನೈ ಮತ್ತು ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ ವಿಮಾನಯಾನ ಸೇವೆ ಒದಗಿಸುತ್ತಿತ್ತು. ಆದರೆ ಕಳೆದ ಐದು ದಿನಗಳಿಂದ ಈ ಮಾರ್ಗಗಳ ವಿಮಾನ ಹಾರಾಟ ಸಂಪೂರ್ಣ ಸ್ಥಗಿತಗೊಂಡಿದೆ.

ಜೂನ್ ಆರಂಭದಿಂದಲೇ ರದ್ದು
ಚೆನ್ನೈ – ಶಿವಮೊಗ್ಗ – ಚೆನ್ನೈ ಮತ್ತು ಹೈದರಾಬಾದ್ – ಶಿವಮೊಗ್ಗ – ಹೈದರಾಬಾದ್ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಈ ವಿಮಾನಗಳು ಜೂನ್ ಆರಂಭದಿಂದಲೇ ಸ್ಥಗಿತಗೊಂಡಿವೆ. ಜೂನ್ 1ರಿಂದ ಚೆನ್ನೈ ಮಾರ್ಗದ ವಿಮಾನ ಹಾಗೂ ಜೂನ್ 2ರಿಂದ ಹೈದರಾಬಾದ್ ಮಾರ್ಗದ ವಿಮಾನಯಾನ ಸೇವೆ ನಿಂತಿದ್ದು, ಪ್ರಯಾಣಿಕರಲ್ಲಿ ಭಾರಿ ಗೊಂದಲ ಮೂಡಿಸಿದೆ.
ಆನ್‌ಲೈನ್ ಬುಕಿಂಗ್ ಕೂಡ ಬಂದ್
ಸೇವೆ ರದ್ದಾದ ಬೆನ್ನಲ್ಲೇ ಆನ್‌ಲೈನ್ ಹಾಗೂ ವಿವಿಧ ಏಜೆನ್ಸಿಗಳ ಮೂಲಕ ನಡೆಯುತ್ತಿದ್ದ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಸೀಟುಗಳನ್ನು ಕಾಯ್ದಿರಿಸಲು ಯಾವುದೇ ಅವಕಾಶ ಇಲ್ಲದಂತಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ 2024ರ ಅಕ್ಟೋಬರ್ 10ರಿಂದ ಸೇವೆ ಆರಂಭಿಸಿದ್ದ ಸ್ಪೈಸ್ ಜೆಟ್‌ನ ಹೈದರಾಬಾದ್ ಮಾರ್ಗಕ್ಕೆ ಉತ್ತಮ ಬೇಡಿಕೆ ಇತ್ತು. ಆದಾಗ್ಯೂ ಸಂಸ್ಥೆ ದಿಢೀರನೆ ಸೇವೆ ನಿಲ್ಲಿಸಿದ್ದು, ಈ ಅನಿಶ್ಚಿತತೆ ಎಷ್ಟು ದಿನ ಮುಂದುವರಿಯಲಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಈ ಕುರಿತು ವಿಮಾನ ನಿಲ್ದಾಣದ ಸ್ಪೈಸ್ ಜೆಟ್ ಸಿಬ್ಬಂದಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಇಂಡಿಗೋ ನಿರ್ಗಮನದ ಬೆನ್ನಿಗೆ ಮತ್ತೊಂದು ಹೊಡೆತ
ಬೆಂಗಳೂರು – ಶಿವಮೊಗ್ಗ ಮಧ್ಯೆ ಸೇವೆ ಒದಗಿಸುತ್ತಿದ್ದ ಇಂಡಿಗೋ ಸಂಸ್ಥೆಯು 2026ರ ಮೇ 1ರಿಂದ ತನ್ನ ಸೇವೆ ಸ್ಥಗಿತಗೊಳಿಸಿತ್ತು. ಬೇರೆ ವಿಮಾನಗಳ ಮೂಲಕ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದರಾದರೂ, ಈ ಪ್ರಯತ್ನಗಳ ನಡುವೆಯೇ ಈಗ ಸ್ಪೈಸ್ ಜೆಟ್ ಕೂಡ ರದ್ದಾಗಿರುವುದು ಹಿನ್ನಡೆಯಾಗಿದೆ.
ಸದ್ಯಕ್ಕಿರುವ ಏಕೈಕ ಆಸರೆ ಸ್ಟಾರ್ ಏರ್
ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್‌ಲೈನ್ಸ್ ಸಂಸ್ಥೆ ಮಾತ್ರ ಸೇವೆ ಒದಗಿಸುತ್ತಿದೆ. ಈ ಸಂಸ್ಥೆಯು ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ ಹಾಗೂ ಗೋವಾಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ನಿತ್ಯ ಆರು ಟ್ರಿಪ್‌ಗಳ ಹಾರಾಟ ನಡೆಸುತ್ತಿದೆ.
ಬೆಳಗ್ಗೆ 10:50ಕ್ಕೆ ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ ಆಗಮಿಸಲಿದೆ. ಬೆಳಗ್ಗೆ 11:20ಕ್ಕೆ ಶಿವಮೊಗ್ಗದಿಂದ ತಿರುಪತಿಗೆ ನಿರ್ಗಮಿಸಲಿದೆ. ಮಧ್ಯಾಹ್ನ 2ಕ್ಕೆ ತಿರುಪತಿಯಿಂದ ಶಿವಮೊಗ್ಗಕ್ಕೆ ಆಗಮಿಸಲಿದೆ. ಮಧ್ಯಾಹ್ನ 2:30ಕ್ಕೆ ಶಿವಮೊಗ್ಗದಿಂದ ಗೋವಾಗೆ ತೆರಳಲಿದೆ. ಸಂಜೆ 4:40ಕ್ಕೆ ಗೋವಾದಿಂದ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲಿದೆ. ಸಂಜೆ 5:10ಕ್ಕೆ ಶಿವಮೊಗ್ಗದಿಂದ ಹೈದರಾಬಾದ್‌ಗೆ ನಿರ್ಗಮಿಸಲಿದೆ.
ನಿಲ್ದಾಣದ ಭವಿಷ್ಯವೇನು?
ಶಿವಮೊಗ್ಗ ವಿಮಾನ ನಿಲ್ದಾಣವು ತಾಂತ್ರಿಕವಾಗಿ ಅಪ್‌ಗ್ರೇಡ್ ಆಗುತ್ತಿದ್ದು, ಇದೇ ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ (Night Landing) ವ್ಯವಸ್ಥೆ ಆರಂಭವಾಗುವ ನಿರೀಕ್ಷೆ ಇದೆ. ಈ ತಂತ್ರಜ್ಞಾನ ಜಾರಿಯಾದರೆ ದಟ್ಟ ಮೋಡ, ಮಂಜು ಹಾಗೂ ಮಳೆಯ ಸಂದರ್ಭದಲ್ಲೂ ವಿಮಾನಗಳು ಸರಾಗವಾಗಿ ಲ್ಯಾಂಡ್ ಆಗಬಹುದು. KSIIDC ಅಧಿಕಾರಿಗಳು ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರಾದರೂ, ಕೇವಲ ಎರಡು ತಿಂಗಳ ಅಂತರದಲ್ಲಿ ಎರಡು ಪ್ರಮುಖ ವಿಮಾನ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿರುವುದು ವಿಮಾನ ನಿಲ್ದಾಣದ ಭವಿಷ್ಯದ ಕುರಿತು ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ.
