ಶಿವಮೊಗ್ಗ ಲೈವ್.ಕಾಂ | SHIMOGA | 17 ಜನವರಿ 2020

ಈ ಶಾಲೆಯ ಶಿಕ್ಷಕರು ಪ್ರತಿದಿನ ಗಸ್ತು ತಿರುಗುತ್ತಾರೆ. ತರಗತಿ ಆರಂಭಕ್ಕು ಮೊದಲು ಮತ್ತು ನಂತರ ವಿದ್ಯಾರ್ಥಿಗಳ ಮನೆಗೆ ಭೇಟಿ ಕೊಡುತ್ತಾರೆ. ಗಸ್ತು ಪದ್ಧತಿಯಿಂದಾಗಿ ಈ ಸರ್ಕಾರಿ ಶಾಲೆ ಈಗ ರಾಜ್ಯಕ್ಕೆ ಮಾದರಿಯಾಗಿದೆ. ಸುತ್ತಮುತ್ತಲ ಊರಿನಲ್ಲಿ ಹಲವು ಬದಲಾವಣೆಗಳಾಗುತ್ತಿವೆ.
ಇದು ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ. ಸುತ್ತಮುತ್ತಲು ನಾಲ್ಕಾರು ಖಾಸಗಿ ಶಾಲೆಗಳಿದ್ದರು, ಈ ಸರ್ಕಾರಿ ಶಾಲೆಗೆ ಊರವರಿಗೆ ಅಚ್ಚುಮೆಚ್ಚು. ಅದಕ್ಕೆ ಕಾರಣ ಈ ಶಾಲೆಯಲ್ಲಿರುವ ಶಿಕ್ಷಕರು ಮತ್ತು ಅವರು ರೂಢಿಸಿಕೊಂಡಿರುವ ವಿಭಿನ್ನ ಶೈಕ್ಷಣಿಕ ಪದ್ಧತಿ.
ಹಗಲು, ರಾತ್ರಿ ಗಸ್ತು ತಿರುಗುತ್ತಾರೆ
ಪಿಳ್ಳಂಗಿರಿ ಸರ್ಕಾರಿ ಪ್ರೌಢಶಾಲೆಯಲ್ಲಿ 270 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ನೂರು ಮಕ್ಕಳು ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ಈ ಮಕ್ಕಳ ಮೇಲೆ ಹೆಚ್ಚು ನಿಗಾ ವಹಿಸಿ, ಶಿಕ್ಷಕರು ಗಸ್ತು ವ್ಯವಸ್ಥೆ ಆರಂಭಿಸಿದ್ದಾರೆ. ಶಾಲೆಯಲ್ಲಿ ಹನ್ನೊಂದು ಶಿಕ್ಷಕರಿದ್ದಾರೆ. ಎಲ್ಲರು ಸೇರಿ ಒಂದೊಂದು ತಂಡ ರಚಿಸಿಕೊಂಡು, ಬೆಳಗ್ಗೆ ಮತ್ತು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾರೆ.

‘ಓದು, ಬರಹದ ವಿಚಾರದಲ್ಲಿ ಮಕ್ಕಳ ಸ್ಥಾನದಲ್ಲಿ ನಿಂತು ನೋಡಬೇಕು. ಹಾಗಾಗಿಯೇ ನಾವು ಮಕ್ಕಳ ಮನೆಗೆ ರಾತ್ರಿ ವೇಳೆಯಲ್ಲಿ ಭೇಟಿ ಕೊಡುತ್ತೇವೆ. ಆಗಲೆ ಮನೆಯ ನೈಜ ಪರಿಸ್ಥಿತಿ ತಿಳಿಯುವುದು. ಕೆಲವು ಮನೆಗಳಲ್ಲಿ ಟಿವಿ ನೋಡುತ್ತಿರುತ್ತಾರೆ. ಕೆಲವು ಕಡೆಗೆ ಅಪ್ಪ ಕುಡಿದು ಬಂದು ಜಗಳವಾಡುತ್ತಿರುತ್ತಾರೆ. ಇನ್ನು ಕೆಲವು ಕಡೆಗೆ ಮನೆಯಲ್ಲಿ ಗಲಾಟೆಗಳಾಗುತ್ತಿರುತ್ತವೆ. ಇದರಿಂದ ಮಕ್ಕಳಿಗೆ ಕಲಿಕಾ ವಾತಾವರಣ ಇಲ್ಲದಂತಾಗುತ್ತದೆ. ಎಲ್ಲವನ್ನು ಕೂಲಂಕಷವಾಗಿ ವಿಚಾರಿಸಿಕೊಂಡು, ಬದಲಾವಣೆ ಮಾಡುವುದಕ್ಕಾಗಿಯೇ ಮನೆ ಮನೆ ಭೇಟಿ ಮಾಡುತ್ತಿದ್ದೇವೆ’ ಅನ್ನುತ್ತಾರೆ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ.
ಗಸ್ತು ತಿರುಗುವುದರಿಂದ ಆದ ಪ್ರಯೋಜನವೇನು?
ಶಿಕ್ಷಕರು ಗಸ್ತು ತಿರುಗುತ್ತಿರುವುದರಿಂದ ಮಕ್ಕಳ ಕಲಿಕಾ ಪದ್ಧತಿ ಬದಲಾಗಿದೆ. ಅವರ ಮನೆಯ ವಾತಾವರಣವು ಚೇಂಜ್ ಆಗಿದೆ. ಮಕ್ಕಳ ವಿದ್ಯಭ್ಯಾಸಕ್ಕೆ ಅನುಕೂಲವಾಗಲಿ ಎಂದು ಹಲವು ಮನೆಗಳಲ್ಲಿ ಟಿವಿ ಕೇಬಲ್ ಕಟ್ ಆಗಿವೆ. ಅನೇಕ ಪೋಷಕರು ಮದ್ಯಪಾನ ತ್ಯಜಿಸಿದ್ದಾರೆ. ಮಕ್ಕಳು ಓದುವ ವೇಳೆ ಮನೆಯಲ್ಲಿ ಪ್ರಶಾಂತ ವಾತಾವರಣ ನಿರ್ಮಾಣವಾಗುತ್ತಿದೆ.

‘ಓದುವ ವಾತಾವರಣ ಹೇಗಿರಬೇಕು ಎಂದು ಶಿಕ್ಷಕರು ಮನೆಗೆ ಬಂದು ತಿಳಿಸುತ್ತಿದ್ದಾರೆ. ರಾತ್ರಿ ವೇಳೆ ಪೋಷಕರು, ಮನೆಯವರೆಲ್ಲ ಬೇಗ ಮಲಗಿದರೆ ಮಕ್ಕಳು ಅವರೊಂದಿಗೆ ನಿದ್ರಿಸಿಬಿಡುತ್ತಾರೆ. ಅದರ ಬದಲು ಮಕ್ಕಳ ಜೊತೆಗೆ ಕುಳಿತು ಏನೇನು ಓದುತ್ತಿದ್ದಾರೆ ಅನ್ನುವುದನ್ನು ಗಮಿಸಿ. ಓದು, ಬರಹ ಬರದಿದ್ದರೂ ಪಕ್ಕದಲ್ಲಿ ಕುಳಿತು ಅವರು ಓದುವುದನ್ನು ಕೇಳಿಸಿಕೊಳ್ಳಿ. ಬೆಳಗ್ಗೆ ಮಕ್ಕಳು ಶಾಲೆಗೆ ಬಂದ ಬಳಿಕ ಮನೆ ಕೆಲಸಗಳನ್ನು ಮಾಡಿ. ಪೋಷಕರು ಹೆಚ್ಚು ಅವಧಿ ಮಕ್ಕಳ ಜೊತೆಗಿರಬೇಕು. ಅವರ ಕಲಿಕೆ ಕಡೆಗೆ ಗಮನ ವಹಿಸಬೇಕು ಅಂತಾ ಸಲಹೆ ಕೊಡುತ್ತಿದ್ದಾರೆ’ ಅನ್ನುತ್ತಾರೆ ವಿದ್ಯಾರ್ಥಿಯೊಬ್ಬನ ಪೋಷಕರಾದ ಸಾವಿತ್ರಿ.

ಬಲ್ಬ್ ಬದಲಾಯಿಸಿದರು, ಕರೆಂಟ್ ಬಿಲ್ ಕಟ್ಟಿಸಿದರು
ಮನೆ ಭೇಟಿ ವೇಳೆ ಹಲವು ಕಡೆ ವಿದ್ಯುತ್ ಸಮಸ್ಯೆ ಇರುವುದು ತಿಳಿದು ಬಂದಿದೆ. ಅದನ್ನು ಈ ಶಿಕ್ಷಕರೆ ಬಗೆ ಹರಿಸಿದ್ದಾರೆ. ‘ಸರಿಯಾದ ವೊಲ್ಟೇಜ್ ಬಲ್ಬ್ ಇಲ್ಲದಿದರೆ ಮಕ್ಕಳ ಓದಿಗೆ ತೊಂದರೆ ಆಗಲಿದೆ. ಇದನ್ನು ಗಮನಿಸಿ ಓದಲು ಅನುಕೂಲಕರವಾದ ಬಲ್ಬ್’ಗಳನ್ನು ಶಿಕ್ಷಕರೆ ತಂದು, ಹಾಕಿಕೊಡುತ್ತಿದ್ದಾರೆ. ಇದರಿಂದ ಮಕ್ಕಳು ಸರಿಯಾದ ಬಳಕಿನಲ್ಲಿ ಓದಲು ಅನುಕೂಲವಾಗುತ್ತಿದೆ’ ಅನ್ನುತ್ತಾರೆ ಪೋಷಕರಾದ ಮಹಾಲಿಂಗಂ. ಇನ್ನು, ಕೆಲವು ವಿದ್ಯಾರ್ಥಿಗಳ ಮನೆಯಲ್ಲಿ ವಿದ್ಯುತ್ ಬಿಲ್ ಪಾವತಿಸದೆ, ಫ್ಯೂಸ್ ತೆಗೆಯಲಾಗಿತ್ತು. ಈ ಕುರಿತು ಮೆಸ್ಕಾಂ ಅಧಿಕಾರಿಗಳ ಜೊತೆಗೆ ಮಾತನಾಡಿ, ಕರೆಂಟ್ ಕೊಡಿಸಿದ್ದಾರೆ.

ಮಕ್ಕಳ ಮನೆಯ ವಿದ್ಯುತ್ ಬಿಲ್ ಪಾವತಿಸಲು, ಬಲ್ಬ್’ಗಳನ್ನು ವಿತರಿಸಲು ಶಿಕ್ಷಕರೆ ದಾನಿಗಳನ್ನು ಹುಡುಕಿ, ನೆರವು ಪಡೆದುಕೊಳ್ಳುತ್ತಿದ್ದಾರೆ. ಇನ್ನು, ಗೆಸ್ತು ತಿರುಗಲು ಶಿಕ್ಷಕರೆ ತಮ್ಮ ಸಂಬಳದಲ್ಲಿ ಒಂದಷ್ಟು ಹಣವನ್ನು ಬಳಸಿಕೊಳ್ಳುತ್ತಿದ್ದಾರೆ.

ಸ್ಪೆಷಲ್ ಕ್ಲಾಸು, ಪೋಷಕರ ಜೊತೆಗೆ ಮೀಟಿಂಗ್
ಪಿಳ್ಳಂಗಿರಿ ಸರ್ಕಾರಿ ಶಾಲೆಯಲ್ಲಿ ಶೇ.85ಕ್ಕಿಂತಲೂ ಹೆಚ್ಚು ಫಲಿತಾಂಶವಿದೆ. ಈ ಬಾರಿ ಶೇ.100ರಷ್ಟು ಫಲಿತಾಂಶ ಬರಬೇಕು ಎಂದು ಮಕ್ಕಳಿಗೆ ವಿಶೇಷ ತರಗತಿಗಳನ್ನು ಮಾಡಲಾಗುತ್ತಿದೆ. ಶಿಕ್ಷಣದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ಮಾಡಿ, ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಇನ್ನು ಪದೇ ಪದೇ ಪೋಷಕರ ಸಭೆಗಳನ್ನು ಮಾಡಿ, ಮಕ್ಕಳ ಕಲಿಕೆಯ ಕುರಿತು ಚರ್ಚಿಸಲಾಗುತ್ತಿದೆ. ಇದಿಷ್ಟೇ ಅಲ್ಲ, ಪರೀಕ್ಷೆ ಹತ್ತಿರವಾಗುತ್ತಿದ್ದಂತೆ, ಪರೀಕ್ಷಾ ಸೆಂಟರ್’ಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತದೆ. ಅಲ್ಲಿಯ ವಾತಾವರಣಕ್ಕೆ ಮಕ್ಕಳು ಅಡ್ಜೆಸ್ಟ್ ಆಗಬೇಕು ಅನ್ನುವುದು ಇದರ ಉದ್ದೇಶ.

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ, ಶೈಕ್ಷಣಿಕ ಪರಿಸರ ಉತ್ತಮಗೊಳಿಸುವ ಶಿಕ್ಷಕರ ಪ್ರಯತ್ನಕ್ಕೆ ಶಾಲೆಯ SDMC ಸದಸ್ಯರು, ಗ್ರಾಮಸ್ಥರು ಬೆಂಬಲವಾಗಿ ನಿಂತಿದ್ದಾರೆ. ಇದೇ ಕಾರಣಕ್ಕೆ ಶಾಲೆಯ ದಾಖಲಾತಿ ಹೆಚ್ಚಳವಾಗುತ್ತಿದೆ. ಅಲ್ಲದೆ ಪಾಠಕ್ಕೆ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇದೆ. ಮೂರು ಹೆಚ್ಚುವರಿ ಕೊಠಡಿಗಳು ಬೇಕಿದೆ ಅನ್ನುತ್ತಾರೆ ಪೋಷಕರು.

ಎಜುಕೇಷನ್ ಮಿನಿಸ್ಟರ್ ಭೇಟಿ ಕೊಡಲಿ
ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆ ಎಂಬ ಅಪವಾದವಿದೆ. ಇದೇ ಕಾರಣಕ್ಕೆ ಆಗಾಗ ಹಲವು ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪವು ಆಗುತ್ತಿರುತ್ತದೆ. ಆದರೆ ಪಿಳ್ಳಂಗಿರಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರ ಆಸಕ್ತಿಯಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗುತ್ತಿದೆ. ಈ ಶಾಲೆಗೆ ಶಿಕ್ಷಣ ಸಚಿವರು ಒಮ್ಮೆ ಭೇಟಿ ಕೊಡಬೇಕು, ಇಲ್ಲಿಯ ಶಿಕ್ಷಕರ ಗಸ್ತು ವ್ಯವಸ್ಥೆಯನ್ನು ರಾಜ್ಯದ ಇತರೆ ಸರ್ಕಾರಿ ಶಾಲೆಗಳಲ್ಲೂ ಜಾರಿಗೊಳಿಸುವಂತೆ ಮಾಡಬೇಕು ಅನ್ನುವುದು ಪೋಷಕರ ಆಶಯವಾಗಿದೆ.





ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]