ಶಿವಮೊಗ್ಗ: ‘ಹಿಂದೆ 17 ಜನ ಕಾಂಗ್ರೆಸ್ ಶಾಸಕರಿಗೆ ದುಡ್ಡು ಕೊಟ್ಟು ಖರೀದಿ ಮಾಡುವ ಮೂಲಕವೇ ನಾವು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದೆವು. ಆ ನಿರ್ಧಾರದಿಂದ ಆಗ ತಾತ್ಕಾಲಿಕ ಜಯ ಸಿಕ್ಕಿತ್ತಾದರೂ, ಅಂತಿಮವಾಗಿ ನಮ್ಮದೇ ಸರ್ಕಾರ ಹಾಳಾಗಲು ಅದು ಕಾರಣವಾಯಿತು’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಸಂದರ್ಭ ಅಡ್ಡಮತದಾನ ನಡೆದಿದೆ. ಇದರ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ವಿಜಯೇಂದ್ರ ನಿರ್ಧಾರ ಹಿಂಪಡೆಯಲಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆಣೆ-ಪ್ರಮಾಣದ ವಿರುದ್ಧ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು. ‘ಕೋಟ್ಯಂತರ ಜನರ ಆರಾಧ್ಯ ದೈವವಾಗಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಭಕ್ತಿಯನ್ನು ವಿಜಯೇಂದ್ರ ಓರೆಗೆ ಹಚ್ಚಬಾರದು. ಮೊದಲು ಅವರು ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಅಡ್ಡ ಮತದಾನ ಮಾಡಿದವರು ಮಂಜುನಾಥನ ಮುಂದೆ ಆಣೆ ಮಾಡಿ, ಅಣ್ಣಪ್ಪ ಸ್ವಾಮಿ ಮುಂದೆ ಕ್ಷಮೆ ಕೇಳಿದರೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿರುವುದಿಲ್ಲ’ ಎಂದರು.
ಇದೇ ವೇಳೆ ಆಣೆ-ಪ್ರಮಾಣದ ರಾಜಕೀಯವನ್ನು ಲೇವಡಿ ಮಾಡಿದ ಅವರು, ‘ಶಿವಮೊಗ್ಗದ ವಾರ್ಡ್ ಒಂದರ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬ ಸಿಗಂದೂರು ಚೌಡೇಶ್ವರಿ ದೇವಿಯ ಫೋಟೊ ಹಾಗೂ 5 ರೂಪಾಯಿ ಕೊಟ್ಟು ಆಣೆ ಮಾಡಿಸಿದ್ದ. ಮರುದಿನ ಮತ್ತೊಬ್ಬ ಅಭ್ಯರ್ಥಿ ಮಾರಮ್ಮನ ಫೋಟೊ ಜೊತೆ 10 ರೂಪಾಯಿ ಕೊಟ್ಟು ಆಣೆ ಮಾಡಿಸಿದ. ಕೊನೆಗೆ ಹತ್ತು ರೂಪಾಯಿ ಕೊಟ್ಟವನೇ ಚುನಾವಣೆಯಲ್ಲಿ ಗೆದ್ದ’ ಎಂದು ಉದಾಹರಣೆ ನೀಡಿದರು.
