ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |12 DECEMBER 2022
ಶಿವಮೊಗ್ಗ : ಗುಜರಾತ್ ಮತ್ತು ಉತ್ತರ ಭಾರತದ ಕೆಲವು ವರ್ತಕರ ಲಾಭಕ್ಕಾಗಿ ಕರ್ನಾಟಕದ ಲಕ್ಷಾಂತರ ಅಡಕೆ (adike rate down) ಬೆಳೆಗಾರರ ಹಿತವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಲಿ ಕೊಟ್ಟಿದೆ ಎಂದು ಕಾಂಗ್ರೆಸ್ ಮುಖಂಡ, ಮಲೆನಾಡು ಪ್ರದೇಶ ಸಂತ್ರಸ್ಥರ ಅಧ್ಯಯನ ಸಮಿತಿ ಸಂಚಾಲಕ ರಮೇಶ್ ಹೆಗ್ಡೆ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಹೆಗ್ಡೆ ಅವರು, ಕರ್ನಾಟಕದಲ್ಲಿ 5.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ದೇಶದ ಒಟ್ಟು ಅಡಕೆ ಬೆಳೆಯ ಶೇ.80ರಷ್ಟು ಅಡಕೆ ರಾಜ್ಯದಲ್ಲಿ ಬೆಳೆಯಲಾಗುತ್ತಿದೆ. ಆದರೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಡಕೆ ಬೆಳೆಗಾರರ ಹಿತ ಕಾಯುವಲ್ಲಿ ವಿಫಲವಾಗಿದೆ. ಇದೆ ಕಾರಣಕ್ಕೆ ಅಡಕೆ ಬೆಲೆ ಕುಸಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
(adike rate down)
ಬೆಲೆ ಕುಸಿಯುಲು 3 ಕಾರಣ
ಕಾರಣ 1 – ವಿದೇಶಿ ಅಡಕೆ ಆಮದು
ದೇಶದಲ್ಲಿ ಅಡಕೆ ದಾಸ್ತಾನು ಇದೆ. ಹಾಗಿದ್ದೂ, ಕನಿಷ್ಠ ಖರೀದಿ ದರಕ್ಕಿಂತಲು ಕಡಿಮೆ ದರದಲ್ಲಿ ಭುತಾನ್ ನಿಂದ ಅಡಕೆ ಆಮದು ಮಾಡಿಕೊಳ್ಳಲಾಗುತ್ತಿದೆ. 2017ರಲ್ಲಿ ಪ್ರತಿ ಕೆ.ಜಿ. ಅಡಕೆ ಆಮದಿಗೆ ಕನಿಷ್ಠ ಖರೀದಿ ದರ 251 ನಿಗದಿಪಡಿಸಲಾಗಿತ್ತು. ಈಗ ಅದಕ್ಕೂ ರಿಯಾಯಿತಿ ನೀಡಿ 17 ಸಾವಿರ ಟನ್ ಅಡಕೆ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಮತ್ತು ಉತ್ತರ ಭಾರತದ ಕೆಲವು ವರ್ತಕರಿಗೆ ಅನುಕೂಲ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
(adike rate down)
ಕಾರಣ 2 – ಅಡಕೆ ಕಳ್ಳ ಸಾಗಣೆ
ಈಶಾನ್ಯ ಭಾರತದ ಮಿಜೋರಾಂ, ಮಣಿಪುರದ ಮೂಲಕ ಸಾವಿರಾರು ಟನ್ ಅಡಕೆ ಕಳ್ಳ ಸಾಗಣೆಯಾಗುತ್ತಿದೆ. ಮಯಾನ್ಮಾರ್ ನಿಂದ ಕಳ್ಳ ಹಾದಿಯಲ್ಲಿ ಅಡಕೆ ಬರುತ್ತಿದೆ. ಮಿಜೋರಾಂನ ಕಾಂಗ್ರೆಸ್ ಶಾಸಕರೊಬ್ಬರು ಕಳ್ಳ ಸಾಗಣೆ ತಡೆಗೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಈ ಅಡಕೆ ಹೋಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದರು. ಕ್ಯಾಂಪ್ಕೊ ಸಂಸ್ಥೆಯು ಅಡಕೆ ಕಳ್ಳ ಸಾಗಣೆ ತಡೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಪತ್ರ ಬರೆದಿದೆ. ಆದರೆ ಈತನಕ ಕ್ರಮ ಕೈಗೊಂಡಿಲ್ಲ. ಇದು ಕೂಡ ಗುಜರಾತ್ ವರ್ತಕರಿಗೆ ಲಾಭ ಮಾಡಿಕೊಡುವ ಹುನ್ನಾರವಾಗಿದೆ.
(adike rate down)
ಕಾರಣ 3 – ಶ್ರೀಲಂಕಾದಿಂದ ಕಳಪೆ ಅಡಕೆ
ಭಾರತ ತನ್ನ ನೆರೆಹೊರೆ ದೇಶದೊಂದಿಗೆ ಸಾಫ್ಟಾ, ಸಾರ್ಕ್ ಮತ್ತು ಭಾರತ – ಶ್ರೀಲಂಕಾ ನಡುವೆ ಮುಕ್ತ ವಾಣಿಜ್ಯ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ದುರುಪಯೋಗ ಮಾಡಿಕೊಂಡು ಇಂಡೋನೇಷಿಯಾದ ಕಳಪೆ ಅಡಕೆಯನ್ನು ಭಾರತಕ್ಕೆ ರಫ್ತು ಮಾಡಲಾಗುತ್ತಿದೆ. ಇಂಡೋನೇಷಿಯಾ ದೇಶದ ಅಡಕೆಯನ್ನು ಶ್ರೀಲಂಕಾಗೆ ಆಮದು ಮಾಡಿಕೊಳ್ಳಲಾಗುತ್ತದೆ. ಅದನ್ನೆ ಶ್ರೀಲಂಕ ಮೂಲದ ಅಡಕೆ ಎಂದು ಬಿಂಬಿಸಿ ಕಳಪೆ ಅಡಕೆಯನ್ನು ಭಾರತಕ್ಕೆ ರಫ್ತು ಮಾಡಲಾಗುತ್ತಿದೆ. ಇದನ್ನು ಕೂಡ ಕೇಂದ್ರ ಸರ್ಕಾರ ತಡೆಯುತ್ತಿಲ್ಲ.
ಕಾಂಗ್ರೆಸ್ ಕಾಲದಲ್ಲಿ ದಾಖಲೆ ಬೆಲೆ
ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಪ್ರತಿ ಕ್ವಿಂಟಾಲ್ ಅಡಕೆ ಬೆಲೆ ದಾಖಲೆ ಮಟ್ಟ ತಲುಪಿತ್ತು. ವಿದೇಶದಿಂದ ಆಮದು ಕನಿಷ್ಠ ಖರೀದಿ ದರವನ್ನು ಹೆಚ್ಚಳ ಮಾಡಿದ್ದರು. ಹಾಗಾಗಿ ಆಮದು ಕಡಿಮೆಯಾಗಿತ್ತು. ಇನ್ನು ಈಶಾನ್ಯ ಭಾಗದಿಂದ ಕಳ್ಳ ಸಾಗಣೆಯನ್ನು ಕೂಡ ತಡೆದಿದ್ದರು. ಇದು ರಾಜ್ಯದ ಅಡಕೆ ಬೆಳೆಗಾರರಿಗೆ ಲಾಭ ತಂದು ಕೊಟ್ಟಿತ್ತು ಎಂದು ರಮೇಶ್ ಹೆಗ್ಡೆ ತಿಳಿಸಿದರು.
ಇದನ್ನೂ ಓದಿ – ಅಡಕೆ ಬೆಳೆಗಾರರ ನಿದ್ರೆಗೆಡಿಸಿದ ರೇಟ್, ಎಲೆ ಚುಕ್ಕೆ ರೋಗ, ಇಳುವರಿ ಕುಸಿತದ ಬೆನ್ನಿಗೆ ಮತ್ತೊಂದು ಶಾಕ್
ಪ್ರಮುಖರಾದ ದೀಪಕ್ ಸಿಂಗ್, ನಗರದ ಮಹಾದೇವಪ್ಪ, ಖಲೀಮ್ ಉಲ್ಲಾ, ಹೆಚ್.ಎಂ.ಮಧು, ಮಂಜುನಾಥ್, ವಿಜಯ್ ಕುಮಾರ್, ಚಂದ್ರಭೂಪಾಲ್ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422