ಶಿವಮೊಗ್ಗ ಲೈವ್.ಕಾಂ | 01 ಏಪ್ರಿಲ್ 2019
ಲೋಕಸಭೆ ಚುನಾವಣೆಯ ಮತದಾನಕ್ಕೆ ಇನ್ನು 22 ದಿನಗಳಷ್ಟೇ ಬಾಕಿ ಇದೆ. ಮತದಾರರನ್ನು ಸೆಳೆಯಲು ಬಿಜೆಪಿ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಉಪ ಚುನಾವಣೆಯಷ್ಟೇ ಟಫ್ ಕಾಂಪಿಟೇಷನ್ ಇರುವುದರಿಂದ, ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ ಮತಯಾಚನೆ ಮಾಡುತ್ತಿದ್ದಾರೆ.
![]() |

ಕೋರ್ಟು, ಕಚೇರಿ, ಬೆಂಗಳೂರು
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಈ ಬಾರಿಯ ಚುನಾವಣೆ ಅತ್ಯಂತ ಪ್ರತಿಷ್ಠೆಯದ್ದಾಗಿದೆ. ಉಪ ಚುನಾವಣೆಯಲ್ಲಿ ಕಡಿಮೆಯಾಗಿದ್ದ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳಬೇಕು ಅನ್ನುವ ಛಲದೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಬೂತ್ ಮಟ್ಟದ ಕ್ಯಾಂಪೇನ್ ಮುಕ್ತಾಯವಾಗಿದೆ. ಹಾಗಾಗಿ ಕೋರ್ಟು, ಕಚೇರಿಗಳಲ್ಲಿ ಮತಯಾಚಿಸುತ್ತಿದ್ದಾರೆ. ಜೊತೆಗೆ, ಬೆಂಗಳೂರಿನಲ್ಲಿರುವ ಶಿವಮೊಗ್ಗದ ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಕೂಡ, ಬೂತ್ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಪೇಜ್ ಪ್ರಮುಖ್’ಗಳನ್ನು ಗುರುತು ಮಾಡಲಾಗಿದ್ದು, ತಮ್ಮ ಪೇಜ್’ನಲ್ಲಿರುವ ಮತದಾರರು ಬಿಜೆಪಿಗೆ ಹಕ್ಕು ಚಲಾಯಿಸುವಂತೆ ಮನವೊಲಿಸುವಂತೆ ಸೂಚಿಸಲಾಗಿದೆ. ಇನ್ನು, ಮತದಾರರನ್ನು ಸೆಳೆಯುವ ಸಂಬಂಧ, ಪ್ರತೀ ದಿನ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಾಗುತ್ತಿದೆ. ಇವತ್ತು ಬೈಂದೂರು, ನಾಳೆ ಸೊರಬ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪ್ರಚಾರ ನಡೆಸಲಿದ್ದಾರೆ.
ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ ಮೈತ್ರಿ ಅಭ್ಯರ್ಥಿ
ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಕೂಡ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಉಪ ಚುನಾವಣೆ ಸಂದರ್ಭ 13 ದಿನದಲ್ಲಿ ಗೆಲುವಿನ ಸನಿಹಕ್ಕೆ ತಲುಪಿದ್ದರು. ಈ ಬಾರಿ ಕಾಲವಕಾಶ ಹೆಚ್ಚಿರುವುದರಿಂದ, ಹೆಚ್ಚು ಪ್ರಚಾರ ಮಾಡಿದರೆ ಗೆಲುವು ಸಾಧಿಸಬಹುದು ಎಂಬುದು ಅವರ ನಂಬಿಕೆ. ಹಾಗಾಗಿ ಪ್ರಚಾರಕ್ಕೆ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ.

ಈಗಾಗಲೆ ಶಿವಮೊಗ್ಗ ನಗರ, ಸೊರಬ, ಬೈಂದೂರು, ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಧು ಬಂಗಾರಪ್ಪ ಪ್ರಚಾರ ನಡೆಸಿದ್ದಾರೆ. ಗ್ರಾಮ ಮಟ್ಟದಲ್ಲಿ, ಕಾರ್ಯಕರ್ತರು, ಮತದಾರರ ಸಭೆ ನಡೆಸುತ್ತಿರುವ ಮಧು ಬಂಗಾರಪ್ಪ, ಶಿವಮೊಗ್ಗ ಕ್ಷೇತ್ರಕ್ಕೆ ಅಗತ್ಯವಿರುವ ನೀರಾವರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಿದ್ದಾರೆ. ಮತ್ತೊಂದೆಡೆ ಮಧು ಬಂಗಾರಪ್ಪ ಅವರು ಬಿರುಸಿನ ಪ್ರಚಾರ ನಡೆಸುತ್ತಿರುವುದರಿಂದ, ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ.
ಸಚಿವ ಡಿ.ಕೆ.ಶಿವಕುಮಾರ್ ಶಿವಮೊಗ್ಗ ಭೇಟಿಯಿಂದ ಕಾಂಗ್ರೆಸ್ ಕಾರ್ಯಕರ್ತರ ಹುರುಪು ಹೆಚ್ಚಿದೆ. ಬೂತ್ ಮಟ್ಟದಲ್ಲಿ ಪ್ರಚಾರ ನಡೆಸುವಂತೆ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ. ಇದು ಪ್ರಚಾರವನ್ನು ಇನ್ನಷ್ಟು ಬಿರುಸುಗೊಳಿಸುವ ಸಾದ್ಯತೆ ಇದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200