ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬಜೆಟ್ (Budget) ಅನ್ನು ಇಸ್ಲಾಮಿಕರಣಗೊಳಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶಿವಮೊಗ್ಗದಲ್ಲಿ ಟ್ರಾಕ್ಟರ್ ಜಾಥಾ ನಡೆಸಲಾಯಿತು. ಗೋಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಿತು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಸೇರಿದಂತೆ ಹಲವರು ಟ್ರಾಕ್ಟರ್ ಏರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಾರಿ ಉದ್ದಕ್ಕೂ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.
ಯಾರೆಲ್ಲ ಏನೆಲ್ಲ ಹೇಳಿದರು?
ರಾಜ್ಯ ಬಜೆಟ್ (Budget) ಭ್ರಮನಿರಸನ ಉಂಟು ಮಾಡಿದೆ. ಬಡವರಿಗೆ ಕೊಟ್ಟಂತೆ ಮಾಡಿ ಅವರ ಜೇಬಿನಿಂದಲೇ ಕಸಿದುಕೊಳ್ಳುತ್ತಿದ್ದಾರೆ. ಧರ್ಮ ಓಲೈಕೆಯ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ ನೀಡಿದ್ದಾರೆ. ಹಿಂದೂಗಳಲ್ಲಿ ಬಡವರು ಇಲ್ಲವೆ? ಅವರ ಮದುವೆಗಳಿಗೆ ನೆರವು ಕೊಡಬೇಕಲ್ಲವೆ? ಚಂದ್ರಗುತ್ತಿ ಪ್ರಧಿಕಾರ ಹೊರತು ಶಿವಮೊಗ್ಗ ಜಿಲ್ಲೆಗೆ ಇನ್ನೇನು ಪ್ರಕಟಿಸದೆ ಅನ್ಯಾಯ ಮಾಡಿದ್ದಾರೆ.
ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ಇದು ಸುಳ್ಳಿನ ಭರವಸೆಯ ಬಜೆಟ್. ಕೆಲವೇ ಸಮುದಾಯಕ್ಕೆ ಸೀಮಿತವಾಗಿದೆ. ಹಿಂದುಳಿದವರು, ದಲಿತರನ್ನು ತುಚ್ಛವಾಗಿ ಕಾಣುವಂತಹ ಬಜೆಟ್ ಇದಾಗಿದೆ. ಇದೇ ಮಾದರಿಯ ಆಯವ್ಯಯ ಇನ್ನೊಂದೆರಡು ವರ್ಷ ಮುಂದುವರೆದರೆ ರಾಜ್ಯ ಸರ್ಕಾರ ದಿವಾಳಿ ಆಗಲಿದೆ. ಈ ಬಾರಿ 1.16 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ರಾಜ್ಯದ ಒಟ್ಟು ಸಾಲ ಏಳೂವರೆ ಲಕ್ಷ ಕೋಟಿ ರೂ.ಗೆ ತಲುಪಿದೆ. ಕಾಂಗ್ರೆಸ್ನವರು ರಾಜ್ಯವನ್ನೇ ಅಡವಿಡಲು ಹೊರಟಿದ್ದಾರೆ.
ಕೆ.ಬಿ.ಅಶೋಕ್ ನಾಯ್ಕ್, ಮಾಜಿ ಶಾಸಕ
ಜಿಲ್ಲೆಯ ಬಿಜೆಪಿ ಶಾಸಕರು ಹೇಳಿದ್ದೇನು?
ಈವರೆಗೂ ಇದ್ದಿದ್ದಕ್ಕಿಂತಲು ಹೆಚ್ಚು ಪೇಜ್ ಮತ್ತು ಸಿದ್ದರಾಮಯ್ಯ 16ನೇ ಬಜೆಟ್ ಮಂಡಿಸಿದ್ದಷ್ಟೆ ಸಾಧನೆ. ಗ್ರಾಮೀಣ ರಸ್ತೆಗಳು, ಸೇತುವೆ, ಕಾಲುಸಂಕಕ್ಕೆ ಯಾವುದೇ ಹಣ ಮೀಸಲಿಟ್ಟಿಲ್ಲ. ರೈತರಿಗೆ ಏನು ಕೊಟ್ಟಿಲ್ಲ. ಅಲ್ಪಸಂಖ್ಯಾತರಿಗೆ ಹೆಚ್ಚಿನ ಮೊತ್ತ ನೀಡಿದ್ದಾರೆ. ಅಲ್ಪಸಂಖ್ಯಾತರಲ್ಲಿ ಮುಸ್ಲಿಮರಿಗೆ ಹೆಚ್ಚು ಪಾಲು ಅನುದಾನ ನೀಡಿದ್ದಾರೆ. ಕ್ರಿಶ್ಚಿಯನ್, ಸಿಖ್ಖರು ಸೇರಿ ಬೇರೆ ಯಾವುದೇ ಧರ್ಮೀಯರಿಗೆ ಹಣ ಕೊಟ್ಟಿಲ್ಲ.
– ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ
ಹಿಂದೂ ಧಾರ್ಮಿಕ ಸಂಸ್ಥೆಗಳ ನಿರ್ವಹಣೆ, ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಪ್ರಮುಖ ಪಾತ್ರ ವಹಿಸುವ ಮುಜರಾಯಿ ಇಲಾಖೆಗೆ ಈ ಬಜೆಟ್ನಲ್ಲಿ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಜೊತೆಗೆ ರಾಜ್ಯ ಸರ್ಕಾರವು ಶಿವಮೊಗ್ಗವನ್ನು ಪರೋಕ್ಷ ನಿರ್ಲಕ್ಷ್ಯ ತೋರಿಸಿರುವುದು ಬಹಳ ವಿಷಾದನೀಯ. ಸಿದ್ದರಾಮಯ್ಯ ಅವರು ಮಂಡಿಸಿದ ಅತ್ಯಂತ ‘ಅಸಮರ್ಥ ಬಜೆಟ್’ ಇದಾಗಿದೆ. ಕುರ್ಚಿ ಉಳಿಸಿಕೊಳ್ಳುವ ಯತ್ನದಲ್ಲಿ ಸಿದ್ಧರಾಮಯ್ಯನವರ ಬಜೆಟ್. ಇದು ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಪೂರಕವೇ? ಸಿದ್ದರಾಮಯ್ಯ ಅವರೆ ಉತ್ತರಿಸಬೇಕು.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಶಾಸಕ
ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆ ಹುಸಿ ಮಾಡಿದೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿ, ಹಿಂದುಳಿದವರು ಹಾಗೂ ಬಡವರನ್ನು ಮರೆತಿದ್ದಾರೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೆ ಆಕರ್ಷಕ ಕಾರ್ಯಕ್ರಮಗಳನ್ನು ಘೋಷಿಸಿ ಜನರ ಮೂಗಿಗೆ ತುಪ್ಪ ಸವರಿರುವುದು ದುರ್ದೈವ.
– ಬಿ.ವೈ.ವಿಜಯೇಂದ್ರ, ಶಿಕಾರಿಪುರ ಶಾಸಕ
ಬಜೆಟ್ ಎಂಬುದು ಹಾಳೆಗಳ ಮೇಲಿನ ಲೆಕ್ಕಾಚಾರವಾಗಬಾರದು. ಕೇವಲ ಅಲ್ಪಸಂಖ್ಯಾತರ ಓಲೈಸುವ ವಿಷಯಗಳು ಘೋಷಣೆಯಾಗಿದೆ. ಕನಿಷ್ಠ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಇವಾವು ಬಜೆಟ್ನಲ್ಲಿ ಕಾಣಸಿಗಲಿಲ್ಲ. ಶಿವಮೊಗ್ಗ ಜಿಲ್ಲೆಯ ಬಹು ಬೇಡಿಕೆಯ ವಿಷಯಗಳಿಗೂ ಪ್ರಾಮುಖ್ಯತೆ ನೀಡಿಲ್ಲ.
– ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ
ಇದನ್ನೂ ಓದಿ » ರಾಜ್ಯ ಬಜೆಟ್, ಶಿವಮೊಗ್ಗಕ್ಕೆ ಸಿಕ್ಕಿದ್ದೇನು? ಪಟ್ಟಿ ಪ್ರಕಟಿಸಿದ ಮಿನಿಸ್ಟರ್ ಮಧು ಬಂಗಾರಪ್ಪ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200