‘ಇಲ್ಲಿ ಯಾರು ನಮ್ಮವರು?’ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳನ್ನು ಕಾಡುತ್ತಿರುವ ಪ್ರಶ್ನೆ ಇದು, ಕಾರಣವೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 26 MARCH 2024

SHIMOGA : ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಬಿರುಸಾಗಿದೆ. ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಬಂಡಾಯ ಅಭ್ಯರ್ಥಿ ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಮೂವರು ಅಭ್ಯರ್ಥಿಗಳಿಗು ಒಳ ಪೆಟ್ಟಿನ ಆತಂಕ ಎದುರಾಗಿದೆ. ‘ಇಲ್ಲಿ ಯಾರು ನಮ್ಮವರು?’ ಎಂದು ಪ್ರಶ್ನಿಸಿಕೊಳ್ಳುವಂತ ಸನ್ನಿವೇಶ ಎದುರಾಗಿದೆ.

ಆತಂಕ, ಅನುಮಾನದಲ್ಲೇ ಅಭ್ಯರ್ಥಿಗಳು

Shimoga-Live-Special-logoತಮ್ಮ ಪಕ್ಷವನ್ನು ಗೆಲ್ಲಿಸಿಕೊಳ್ಳಬೇಕು ಎಂದು ನಾಯಕರು ಕೈಗೊಳ್ಳುವ ನಿರ್ಧಾರಗಳು ಲಾಭದ ಜೊತೆಗೆ ಸಣ್ಣ ಪ್ರಮಾಣದ ನಷ್ಟವನ್ನೂ ಉಂಟು ಮಾಡುತ್ತದೆ. ಮತ್ಯಾವುದೋ ಕ್ಷೇತ್ರದ ಅಭ್ಯರ್ಥಿ ವಿಚಾರ ಈ ಕ್ಷೇತ್ರದಲ್ಲಿ ಪರಿಣಾಮ ಬೀರುತ್ತದೆ. ಮುನಿಸು, ಬಂಡಾಯಕ್ಕು ಕಾರಣವಾಗುತ್ತದೆ. ಇಂತಹ ಹಲವು ಬೆಳವಣಿಗೆಗಳು ಈಗ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಾಣಸಿಗುತ್ತಿದೆ. ಇದೇ ಕಾರಣಕ್ಕೆ ಅಭ್ಯರ್ಥಿಗಳು ತಮ್ಮವರಾರು, ಜೊತೆಗಿದ್ದು ಒಳ ಪೆಟ್ಟು ನೀಡುವವರಾರು ಎಂದು ಅನುಮಾನ, ಆತಂಕದಲ್ಲೇ ಹೆಜ್ಜೆ ಇಡುವಂತಾಗಿದೆ.

ಬಿಜೆಪಿಯಲ್ಲಿ ಹೇಗಿದೆ ಪರಿಸ್ಥಿತಿ?

BJP-Office-Shimoga

ಹಾವೇರಿಯಲ್ಲಿ ಪುತ್ರ ಕಾಂತೇಶ್‌ಗೆ ಟಿಕೆಟ್‌ ಕೈತಪ್ಪಿದ್ದರಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶಗೊಂಡಿದ್ದಾರೆ. ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಗೆಲ್ಲಬಾರದೆಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ಇದು ಬಿಜೆಪಿಯಲ್ಲಿದ್ದ ಯಡಿಯೂರಪ್ಪ ವಿರೋಧಿ ಬಣವನ್ನು ಸಕ್ರಿಯಗೊಳಿಸಿದೆ. ಒಂದಷ್ಟು ಮಂದಿ ಬಹಿರಂಗವಾಗಿ ಈಶ್ವರಪ್ಪ ಅವರೊಂದಿಗೆ ಪ್ರಚಾರಕ್ಕಿಳಿದಿದ್ದಾರೆ. ಇನ್ನೂ ಹಲವರು ಪಕ್ಷದೊಳಗೆ ಇದ್ದು ಅತಂರಿಕ ಬೆಂಬಲ ನೀಡುವ ಭರವಸೆ ನೀಡಿದ್ದಾರಂತೆ. ಇಲ್ಲಿದ್ದು ಅಲ್ಲಿಗೆ ಬೆಂಬಲ ನೀಡುವವರು ಒಳ ಪೆಟ್ಟು ನೀಡುವ ಸಾಧ್ಯತೆ ಇದೆ. ಇದು ರಾಘವೇಂದ್ರ ಅವರನ್ನು ಚಿಂತೆಗೀಡು ಮಾಡಿದೆ.

ಕಾಂಗ್ರೆಸ್‌ನಲ್ಲಿ ಹೇಗಿದೆ ಸ್ಥಿತಿ?

-Congress-Party-Office-Shimoga

ಕಾಂಗ್ರೆಸ್‌ ಪಕ್ಷದಲ್ಲಿಯು ಒಳ ಪೆಟ್ಟಿನ ಆತಂಕ ಎದುರಾಗಿದೆ. ಹೊರಗಿನಿಂದ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಈಗಾಗಲೆ ಹಲವರು ಮುನಿಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಶಿಕಾರಿಪುರ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾ ಕಚೇರಿ ಮುಂಭಾಗ ಪ್ರತಿಭಟನೆಯನ್ನೂ ನಡೆಸಿದ್ದರು. ಇನ್ನು, ಲೋಕಸಭೆ ಚುನಾವಣೆ ಬಳಿಕ ನಡೆಯುವ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಆಯನೂರು ಮಂಜುನಾಥ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಇದರಿಂದ ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಗಳಿಸಲು ಅನುಕೂಲ ಎಂದು ರಾಜ್ಯ ನಾಯಕರು ಲೆಕ್ಕಾಚಾರ ಹಾಕಿದ್ದರು. ಆದರೆ ಟಿಕೆಟ್‌ ಘೋಷಿಸಿದ ಬೆನ್ನಿಗೆ ಪಕ್ಷದೊಳಗಿನ ಅದೇ ಸಮುದಾಯದ ಮುಖಂಡರು ಅಸಮಾಧಾನಗೊಂಡಿದ್ದಾರೆ. ಎಸ್‌.ಪಿ.ದಿನೇಶ್‌ ಅವರು ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್‌ ಕೈ ತಪ್ಪಿದ್ದು ಸಹಜವಾಗಿ ಮೂಲ ಕಾಂಗ್ರೆಸಿಗರಲ್ಲಿ ಅಸಮಾಧಾನ ಮೂಡಿಸಿದೆ. ಇದು ಲೋಕಸಭೆ ಚುನಾವಣಾ ಪ್ರಚಾರದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಈ‍ಶ್ವರಪ್ಪ ಬಣದಲ್ಲಿಯು ಆತಂಕ

130324 Eshwarappa Enter his car in SHIMOGA

ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಈಶ್ವರಪ್ಪ ಅವರಿಗು ಒಳ ಏಟಿನ ಆತಂಕವಿದೆ. ಬಿಜೆಪಿಯಲ್ಲಿ ಸಕ್ರಿಯವಾಗಿದ್ದವರು, ಪಕ್ಷಕ್ಕೆ ಬೆಂಬಲವಾಗಿದ್ದವರೆಲ್ಲ ಈಶ್ವರಪ್ಪ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇವರಲ್ಲಿ ಹಲವರು ಅತ್ತ ಧರಿ, ಇತ್ತ ಪುಲಿ ಅನ್ನುವ ಸ್ಥಿತಿಗೆ ತಲುಪಿದ್ದಾರೆ. ಈಶ್ವರಪ್ಪ ಅವರೊಂದಿಗೆ ಹೆಗಲಿಗೆ ಹೆಗಲು ಕೊಡಲು ಹೋದರೆ ಬಿಜೆಪಿ ಮತ್ತು ರಾಘವೇಂದ್ರ ಅವರ ಕೆಂಗಣ್ಣಿಗೆ ಗುರಿಯಾಗಬಹುದು. ಈಶ್ವರಪ್ಪ ಅವರೊಂದಿಗೆ ಪ್ರಚಾರಕ್ಕೆ ಹೋಗದಿದ್ದರೆ ಅವರ ವಿಶ್ವಾಸ ಕಳೆದುಕೊಳ್ಳಬಹುದು ಎಂದು ಚಿಂತೆಗೀಡಾಗಿದ್ದಾರೆ. ಇದು ಸಹಜವಾಗಿಯೆ ಈಶ್ವರಪ್ಪ ಅವರ ನಿದ್ದೆಗೆಡಿಸಿದೆ.

ಇದನ್ನೂ ಓದಿ – ಲೋಕಸಭೆ ಚುನಾವಣೆ | ಶಿವಮೊಗ್ಗದಲ್ಲಿ ಎಷ್ಟು ಮತದಾರರಿದ್ದಾರೆ? ಪುರುಷರೆಷ್ಟು? ಮಹಿಳೆಯರೆಷ್ಟು? ಇಲ್ಲಿದೆ ಡಿಟೇಲ್ಸ್‌

ಸದ್ಯ ಶಿವಮೊಗ್ಗದ ಮೂವರು ಅಭ್ಯರ್ಥಿಗಳಿಗು ಒಳ ಪೆಟ್ಟು ಮತ್ತು ಒಳ ಪಟ್ಟಿನ ಆತಂಕವಿದೆ. ಇದೆ ಕಾರಣಕ್ಕೆ ಇಲ್ಲಿ ಯಾರು ನಮ್ಮವರು ಎಂದು ಯೋಚಿಸುವಂತಾಗಿದೆ. ಅಲ್ಲದೆ ಪ್ರತಿ ಹೆಜ್ಜೆ ಇಡುವಾಗಲು ಹತ್ತಾರು ಬಾರಿ ಯೋಚಿಸುವಂತಾಗಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment