ಶಿವಮೊಗ್ಗ: ಪಕ್ಷ ಬಲಪಡಿಸುವ ಗುರಿಯೊಂದಿಗೆ ನೂತನ ಜಿಲ್ಲಾಧ್ಯಕ್ಷರ ಆಯ್ಕೆಗೆ ಎಐಸಿಸಿ ಮತ್ತು ಕೆಪಿಸಿಸಿ ವೀಕ್ಷಕರ ಟೀಮ್, ಶಿವಮೊಗ್ಗ ಜಿಲ್ಲೆಯಲ್ಲಿ ಸಾಲು ಸಾಲು ಸಭೆ ನಡೆಸುತ್ತಿದೆ. ಸದ್ಯ ಕಾಂಗ್ರೆಸ್ ಕಚೇರಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ವೀಕ್ಷಕರ ಲಿಸ್ಟ್‌ನಲ್ಲಿ ಸೇರುವ ಟಾಪ್ 6 ನಾಯಕರು ಯಾರಾಗಬಹುದು ಎಂಬ ಕುತೂಹಲ ಜೋರಾಗಿದೆ.
ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಿರುವ ಕಾಂಗ್ರೆಸ್ ಹೈಕಮಾಂಡ್ ಜಿಲ್ಲಾ ಘಟಕಗಳಿಗೆ ಹೊಸ ಸಾರಥಿಗಳ ಹುಡುಕಾಟಕ್ಕೆ ಮುಂದಾಗಿದೆ. ಎಐಸಿಸಿ ಹಾಗೂ ಕೆಪಿಸಿಸಿಯಿಂದ ಇದಕ್ಕಾಗಿ ವೀಕ್ಷಕರನ್ನೂ ನೇಮಕ ಮಾಡಲಾಗಿದೆ. ಇದರ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್‌ನೊಳಗೆ ಬಿರುಸಿನ ಚಟುವಟಿಕೆ ಆರಂಭವಾಗಿದೆ.

ಈ ಬಾರಿ ವಿಭಿನ್ನವಾಗಿ ಆಯ್ಕೆ
ಈ ಬಾರಿ ಅಧ್ಯಕ್ಷರ ಆಯ್ಕೆ ವಿಭಿನ್ನವಾಗಿ ನಡೆಯುತ್ತಿರುವುದರಿಂದ ಇಲ್ಲಿ ಬಣ ರಾಜಕೀಯ, ಪ್ರಭಾವ, ನಾಯಕರ ಕೃಪಾಕಟಾಕ್ಷಕ್ಕೆ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಕೆಲವು ನಾಯಕರು ಕೊನೆಯ ಕ್ಷಣದಲ್ಲಿ ತಮ್ಮ ಪ್ರಭಾವವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?
ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಈ ಬಾರಿಯು ಘಟಾನುಘಟಿಗಳ ಹೆಸರು ಕೇಳಿ ಬರುತ್ತಿದೆ. ಹಾಲಿ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್, ಮಾಜಿ ಸಂಸದ ಆಯನೂರು ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಸೇರಿ ಹಲವರ ಹೆಸರು ಚಾಲ್ತಿಯಲ್ಲಿದೆ.
ಇನ್ನೊಂದೆಡೆ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ 50 ವರ್ಷದೊಳಗಿನ ಯುವ ನಾಯಕತ್ವಕ್ಕೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ರೇಸ್‌ನ ಅಖಾಡಕ್ಕೆ ಯುವ ಪಡೆಯು ಜಿಗಿದಿದೆ. ಮಾಜಿ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್, ಯುವ ಮುಖಂಡ ರಂಗನಾಥ್, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ, ಗಣೇಶ್ ಸಂಗಮೇಶ್ವರ, ಶರತ್ ಮರಿಯಪ್ಪ, ಚೇತನ್ ಗೌಡ ಹೀಗೆ ಹಲವರ ಹೆಸರುಗಳು ಕೇಳಿ ಬರುತ್ತಿವೆ.
ಹೇಗೆ ನಡೆಯುತ್ತೆ ಅಧ್ಯಕ್ಷರ ಆಯ್ಕೆ?
ಈಗಾಗಲೇ ಶಿವಮೊಗ್ಗಕ್ಕೆ ಎಐಸಿಸಿ ಮತ್ತು ಕೆಪಿಸಿಸಿ ವೀಕ್ಷಕರು ಆಗಮಿಸಿದ್ದಾರೆ. ಎಐಸಿಸಿ ವೀಕ್ಷಕ ಎಸ್.ಶರತ್, ಕೆಪಿಸಿಸಿ ವೀಕ್ಷಕರಾದ ಎಂ.ಎ.ಗೋಪಾಲಸ್ವಾಮಿ, ಡಾ. ಬಿ.ತಿಪ್ಪೇಸ್ವಾಮಿ, ಟಿ.ಲೋಕೇಶ್ ಹೊಳಲ್ಕೆರೆ, ಜ್ಯೋತಿ ಪಾಟೀಲ್ ಅವರ ತಂಡ ಜಿಲ್ಲೆಯ ವಿವಿಧೆಡೆ ಸಂಚರಿಸುತ್ತಿದೆ. ಶಿವಮೊಗ್ಗ, ಸಾಗರದಲ್ಲಿ ಸಭೆ ನಡೆಸಲಾಗಿದೆ. ಹಾಗೆಯೇ ಉಳಿದ ತಾಲೂಕುಗಳಲ್ಲಿಯು ಸಭೆಗಳನ್ನು ನಡೆಸಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹವಾಗಲಿದೆ.
ಈ ತಂಡ ಆರು ಮಂದಿಯ ಹೆಸರನ್ನು ಅಂತಿಮಗೊಳಿಸಿ ಮುಚ್ಚಿದ ಲಕೋಟೆಯಲ್ಲಿ ಕೆಪಿಸಿಸಿಗೆ ಪಟ್ಟಿ ರವಾನಿಸಲಿದೆ. ಬಳಿಕ ಆ ಪಟ್ಟಿ ಎಐಸಿಸಿ ಕೈಸೇರಲಿದೆ. ನಂತರ ದೆಹಲಿ ನಾಯಕರು ಜಿಲ್ಲಾಧ್ಯಕ್ಷರ ಹೆಸರು ಅಂತಿಮಗೊಳಿಸಲಿದ್ದಾರೆ. ಹಾಗಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಈ ಟಾಪ್ 6 ಪಟ್ಟಿಯೊಳಗೆ ತಮ್ಮ ಹೆಸರು ಸೇರುವಂತಾಗಬೇಕು ಎಂದು ಕಸರತ್ತು ನಡೆಸುತ್ತಿದ್ದಾರೆ. ಹತ್ತಾರು ಆಕಾಂಕ್ಷಿಗಳ ಪೈಕಿ ಯಾರೆಲ್ಲ ಈ ಪಟ್ಟಿಯೊಳಗೆ ಸೇರಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ.