ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 MARCH 2023
SHIMOGA :ವಿಧಾನಸಭೆ ಚುನಾವಣೆಯಲ್ಲಿ (Election) ರಾಜಕೀಯ ಪಕ್ಷಗಳು ಗೆಲುವಿಗಾಗಿ ಕಸರತ್ತು ಆರಂಭಿಸಿವೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗಿದೆ. ಉಳಿದ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ನಡುವೆ ತೀವ್ರ ಸ್ಪರ್ಧೆ, ಲಾಬಿ, ಒತ್ತಡ ಹೆಚ್ಚಾಗಿದೆ. ಸದ್ಯ ಶಿವಮೊಗ್ಗ ಜಿಲ್ಲೆಯ ಯಾವ್ಯಾವ ಕ್ಷೇತ್ರದಲ್ಲಿ ರಾಜಕೀಯ ಪರಿಸ್ಥಿತಿ ಹೇಗಿದೆ? ಅದರ ಸಂಕ್ಷಿಪ್ತ ವಿವರ ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕ್ಷೇತ್ರ 1 : ಶಿವಮೊಗ್ಗ ನಗರ
ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರು ಹಾಲಿ ಶಾಸಕ. ಈ ಬಾರಿ ಅವರಿಗೆ ಟಿಕೆಟ್ ಸಿಗಲಿದೆಯಾ ಅಥವಾ ಹೊಸ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರಾ ಎಂಬುದು ಸದ್ಯದ ಕುತೂಹಲ ಮತ್ತು ಚರ್ಚೆಯಾಗಿದೆ. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಬಹಿರಂಗವಾಗಿಯೇ ಟಿಕೆಟ್ ಆಕಾಂಕ್ಷಿ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಕೆಲವರು ಟಿಕೆಟ್ ಗಾಗಿ RSS ಪ್ರಮುಖರು, ಬಿಜೆಪಿ ಹೈಕಮಾಂಡ್ ಕದ ತಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್, ಮಾಜಿ ಮೇಯರ್ ಮರಿಯಪ್ಪ ಅವರ ಹೆಸರು ಮುನ್ನಲೆಯಲ್ಲಿದೆ. ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಯುವ ಕುರಿತು ಯಾವುದೆ ಮುನ್ಸೂಚನೆ ಇಲ್ಲ.
ಕ್ಷೇತ್ರ 2 : ಶಿವಮೊಗ್ಗ ಗ್ರಾಮಾಂತರ
ಬಿಜೆಪಿಯ ಕೆ.ಬಿ.ಅಶೋಕ್ ನಾಯ್ಕ್ ಅವರು ಹಾಲಿ ಶಾಸಕ. ಈ ಬಾರಿ ಅವರಿಗೇ ಟಿಕೆಟ್ ಎಂದು ಹೇಳಲಾಗುತ್ತಿದೆ. ಆದರೆ ಮತ್ತಷ್ಟು ಮುಖಂಡರು ಬಿಜೆಪಿ ಟಿಕೆಟ್ ಮೇಲೆ ಕಣ್ಣು ನೆಟ್ಟಿದ್ದಾರಂತೆ. ಇತ್ತ ಕಾಂಗ್ರೆಸ್ ಪಕ್ಷದಲ್ಲಿಯು ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಹಾಗಾಗಿ ಎರಡು ರಾಷ್ಟ್ರೀಯ ಪಕ್ಷಗಳು ಯಾರನ್ನು ಕಣಕ್ಕಿಳಿಸುತ್ತವೆ ಎಂಬ ಕುತೂಹಲ ಮತದಾರರಲ್ಲಿದೆ. ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಸರ್ಕಾರ ರಚನೆ ಮಾಡಿದರೆ ಶಾರದಾ ಪೂರ್ಯಾನಾಯ್ಕ್ ಅವರು ಸಚಿವರಾಗಲಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಕ್ಷೇತ್ರದ ಮತದಾರರಿಗೆ ಮಾತು ಕೊಟ್ಟಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ.
ಕ್ಷೇತ್ರ 3 : ಭದ್ರಾವತಿ
ಕಾಂಗ್ರೆಸ್ ಪಕ್ಷದ ಬಿ.ಕೆ.ಸಂಗಮೇಶ್ವರ ಅವರು ಹಾಲಿ ಶಾಸಕ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಅವರಿಗೇ ಟಿಕೆಟ್ ಘೋಷಣೆಯಾಗಿದೆ. ಎಂ.ಜೆ.ಅಪ್ಪಾಜಿ ಅವರು ಸಂಗಮೇಶ್ವರ ಅವರ ನೇರಾನೇರ ಎದುರಾಳಿಯಾಗಿದ್ದರು (Election). ಅಪ್ಪಾಜಿ ಅವರ ನಿಧನದ ಹಿನ್ನೆಲೆ ಅವರ ಪತ್ನಿ ಶಾರದಾ ಅಪ್ಪಾಜಿ ಅವರು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಹಾಗಾಗಿ ಚುನಾವಣಾ ಅಖಾಡ ಹಿಂದಿಗಿಂತಲು ಹೆಚ್ಚು ಕಾವು ಪಡೆದಿದೆ. ಇತ್ತ ಬಿಜೆಪಿ ಪಕ್ಷವು ಅಭ್ಯರ್ಥಿಯ ಹುಡುಕಾಟದಲ್ಲಿದೆ.
ಕ್ಷೇತ್ರ 4 : ಸಾಗರ
ಬಿಜೆಪಿಯ ಹರತಾಳು ಹಾಲಪ್ಪ ಅವರು ಹಾಲಿ ಶಾಸಕ. ಈ ಬಾರಿಯು ಅವರಿಗೇ ಟಿಕೆಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಬಿಜೆಪಿ ಟಿಕೆಟ್ ಮೇಲೆ ಹಲವರು ಆಸೆಗಣ್ಣು ನೆಟ್ಟಿದ್ದಾರೆ. ಇನ್ನೊಂದೆಡೆ ಹರತಾಳು ಹಾಲಪ್ಪ ಅವರ ವಿರುದ್ಧ ದೂರುಗಳು, ಪ್ರತಿಭಟನೆಗಳು, ಟಿಕೆಟ್ ನೀಡದಂತೆ ಎಚ್ಚರಿಕೆಗಳು ಕೂಡ ಕೇಳಿ ಬರುತ್ತಿವೆ. ಇತ್ತ ಕಾಂಗ್ರೆಸ್ ಪಕ್ಷ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಘೋಷಿಸಿದೆ. ಹಾಗಾಗಿ ಊಳಿದ ಆಕಾಂಕ್ಷಿಗಳಿಗೆ ಸಹಜವಾಗಿಯೇ ಬೇಸರವಾಗಿದೆ. ಚುನಾವಣೆ ವೇಳೆ ಒಳ ಹೊಡೆತ ಇರಲಿದೆ ಎಂದು ಹೇಳಲಾಗುತ್ತಿದೆ. ಆಮ್ ಆದ್ಮಿ ಪಕ್ಷದಿಂದ ವಕೀಲ ದಿವಾಕರ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಕ್ಷೇತ್ರ 5 : ತೀರ್ಥಹಳ್ಳಿ
ಬಿಜೆಪಿಯ ಆರಗ ಜ್ಞಾನೇಂದ್ರ ಅವರು ಹಾಲಿ ಶಾಸಕ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮತ್ತೊಮ್ಮೆ ಟಿಕೆಟ್ ಸಿಗುವುದು ಬಹುತೇಕ ಖಚಿತ. ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಅಭ್ಯರ್ಥಿಯಾಗುತ್ತಾರೋ, ಆರ್.ಎಂ.ಮಂಜುನಾಥಗೌಡ ಅವರು ಅಖಾಡಕ್ಕೆ ಧುಮುಕುತ್ತಾರೋ ಅನ್ನುವುದು ಸದ್ಯದ ಕುತೂಹಲ. ಜೆಡಿಎಸ್ ಪಕ್ಷದಿಂದ ರಾಜಾರಾಮ್ ಅವರು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟ್ ಇದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆ ಬಳಿಕ ಉಳಿದ ರಾಜಕೀಯ ಚಟುವಟಿಕೆ ಬಿರುಸು ಪಡೆಯುವ ಸಾಧ್ಯತೆ ಇದೆ.
ಕ್ಷೇತ್ರ 6 : ಸೊರಬ
ಬಿಜೆಪಿಯ ಕುಮಾರ್ ಬಂಗಾರಪ್ಪ ಅವರು ಹಾಲಿ ಶಾಸಕ. ಈ ಬಾರಿಯು ಅವರಿಗೆ ಟಿಕೆಟ್ ಎಂದು ಹೇಳಲಾಗುತ್ತಿದೆ. ಆದರೆ ನಮೋ ಬ್ರಿಗೇಡ್, ಬಿಜೆಪಿಯೊಳಗಿನ ಕೆಲವು ನಾಯಕರು ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಇದರಲ್ಲಿ ಯಶ ಕಾಣುತ್ತಾರೋ ಇಲ್ಲವೋ ಅನ್ನುವುದು ಸದ್ಯದ ಕುತುಹೂಲ. ಇನ್ನು, ಕಾಂಗ್ರೆಸ್ ಪಕ್ಷದಿಂದ ಮಧು ಬಂಗಾರಪ್ಪಗೆ ಟಿಕೆಟ್ ಫೈನಲ್ ಆಗಿದೆ. ಒಂದು ವೇಳೆ ಬಿಜೆಪಿಯಿಂದ ಕುಮಾರ್ ಬಂಗಾರಪ್ಪ ಅವರು ಕಣಕ್ಕಿಳಿದರೆ ಸೊರಬದಲ್ಲಿ ಮತ್ತೆ ಸಹೋದರರ ಮಧ್ಯೆ ಜಿದ್ದಾಜಿದ್ದಿ ಏರ್ಪಡಲಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್, ದೋಸಾ ತವಾ, ಸೀರೆ, ಬಟ್ಟೆ, ಇಡ್ಲಿ ಕುಕ್ಕರ್ ಸೀಜ್
ಕ್ಷೇತ್ರ 7 : ಶಿಕಾರಿಪುರ
ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಹಾಲಿ ಶಾಸಕ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ಬಹುತೇಕ ಖಚಿತ. ಕ್ಷೇತ್ರದಾದ್ಯಂತ ಓಡಾಡುತ್ತ, ಜನರ ವಿಶ್ವಾಸ ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ಇನ್ನು, ಕಾಂಗ್ರೆಸ್ ಪಕ್ಷ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಯೋಜಿಸಿದೆ. ಟಿಕೆಟ್ ಘೋಷಿಸುವ ಸ್ಕ್ರೀನಿಂಗ್ ಕಮಿಟಿಯು ಜಾತಿ ಲೆಕ್ಕಾಚಾರ, ಸಾಂಪ್ರದಾಯಿಕ ಮತಗಳ ಲೆಕ್ಕಾಚಾರದಲ್ಲಿ, ಜೆಡಿಎಸ್ ಮತಗಳನ್ನು ಅಳೆದು ತೂಗುತ್ತಿದೆ. ಜೆಡಿಎಸ್ ಪಕ್ಷಕ್ಕೆ ಪ್ರಬಲ ಅಭ್ಯರ್ಥಿ ಇಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಜೆಡಿಎಸ್ ಪಕ್ಷದ ಸಾಂಪ್ರದಾಯಿಕ ಮತಗಳು ಯಾರಿಗೆ ಒಲಿಯಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.