ಶಿವಮೊಗ್ಗ: ‘ಜವಾಹರಲಾಲ್ ನೆಹರೂ ಅವರಿಂದ ಆರಂಭವಾಗಿ ರಾಹುಲ್ ಗಾಂಧಿಯವರೆಗೆ ದೇಶದಲ್ಲಿ ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದವರೆಲ್ಲ ನೆಲಕಚ್ಚಿ ಹೋಗಿದ್ದಾರೆ. ಈಗ ಸಂಘಟನೆಯ ತಂಟೆಗೆ ಬಂದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡ ನೆಲಕಚ್ಚಲಿದ್ದಾರೆ’ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ಗೆ ಲೆಕ್ಕ ಕೇಳಲು ಪ್ರಿಯಾಂಕ್ ಖರ್ಗೆ ಯಾರು? ಸಂಘಟನೆಗೆ ಒಂದು ಪೈಸೆ ಕೊಟ್ಟಿದ್ದಾರೆಯೇ? ಆರ್‌ಎಸ್‌ಎಸ್‌ನಲ್ಲಿ ಸಾವಿರಾರು ಅಂಗ-ಸಂಸ್ಥೆಗಳಿದ್ದು, ಅವುಗಳ ಮುಖ್ಯಸ್ಥರು ಯಾರಿಗೆ ಲೆಕ್ಕ ಕೊಡಬೇಕೋ ಅವರಿಗೆ ಕೊಡುತ್ತಿದ್ದಾರೆ. ದೇಶದಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ಸಾವಿರಾರು ಸಂಘ- ಸಂಸ್ಥೆಗಳು ನೋಂದಣಿ ಮಾಡಿಸಿಲ್ಲ. ಅವರನ್ನು ಪ್ರಶ್ನಿಸದ ಗೃಹ ಸಚಿವರು, ಕೇವಲ ಪ್ರಚಾರಕ್ಕಾಗಿ ಆರ್‌ಎಸ್‌ಎಸ್ ಸಂಘಟನೆಯನ್ನು ಗುರಿಯಾಗಿಸಿಕೊಂಡು ಅಪಮಾನ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಆರ್‌ಎಸ್‌ಎಸ್ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡುವ ಸಂಘಟನೆಯಾಗಿದೆ. ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಇರುವುದರಿಂದ ಕೋಟಿ ಕೋಟಿ ಯುವಕರ ನಾಯಕರಾದ ಮೋಹನ್ ಭಾಗವತ್ ಅವರಿಗೆ ಝಡ್ ಪ್ಲಸ್ ಭದ್ರತೆ ಕೊಡಲಾಗಿದೆ. ವಿನಾಶಕಾಲೆ ವಿಪರೀತ ಬುದ್ಧಿ ಎಂಬಂತೆ ಆರ್‌ಎಸ್‌ಎಸ್‌ಗೆ ಲೆಕ್ಕ ಕೇಳಿ ಪ್ರಿಯಾಂಕ್ ಖರ್ಗೆ ದೊಡ್ಡ ಮನುಷ್ಯ ಆಗಲು ಹೊರಟಿದ್ದು, ಅವರು ನಿರ್ನಾಮ ಆಗಲಿದ್ದಾರೆ. ಇಂತಹ ಚಿಲ್ಲರೆ ಹೇಳಿಕೆಗಳಿಗೆ ಮೋಹನ್ ಭಾಗವತ್ ಅವರು ಉತ್ತರಿಸುವ ಅಗತ್ಯವಿರಲಿಲ್ಲ’ ಎಂದರು.

