ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುತೂಹಲಕ್ಕೆ ಕೊನೆಗು ತೆರೆ ಬಿದ್ದಿದೆ. ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ.ಯೋಗೇಶ್ ಅವರನ್ನು ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ನಾಯಕನಿಗೆ ಚುಕ್ಕಾಣಿ
ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಘಟಾನುಘಟಿ ನಾಯಕರ ಮಧ್ಯೆ ಪೈಪೋಟಿ ಇತ್ತು. ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ಜಿಲ್ಲಾ ಅಧ್ಯಕ್ಷರುಗಳು ರೇಸ್‌ನಲ್ಲಿದ್ದರು. ಇವುಗಳ ನಡುವೆ ಯುವ ನಾಯಕ ಹೆಚ್.ಸಿ.ಯೋಗೇಶ್ ಅವರಿಗೆ ಹೈಕಮಾಂಡ್ ಜವಾಬ್ದಾರಿ ನೀಡಿದೆ. ಈ ಬೆಳವಣಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಸಂಘಟನ್ ಸೃಜನ್ ಅಭಿಯಾನ
ಸಂಘಟನ್ ಸೃಜನ್ ಅಭಿಯಾನದ ಅಡಿ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಎಐಸಿಸಿ ಮತ್ತು ಕೆಪಿಸಿಸಿಯ ವೀಕ್ಷಕರು ಜಿಲ್ಲೆಗಳಿಗೆ ಭೇಟಿ ನೀಡಿದ್ದರು. ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಇನ್ನು, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇವುಗಳನ್ನು ಪರಿಶೀಲಿಸಿ ಟಾಪ್ 6 ಮಂದಿಯ ಹೆಸರನ್ನು ಪಕ್ಷದ ಪದಾಧಿಕಾರಿಗಳಿಗೆ ವೀಕ್ಷಕರು ಲಕೋಟೆಯಲ್ಲಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಪರಿಶೀಲನೆ ನಡೆಸಿ ಕೊನೆಗೆ ಜಿಲ್ಲಾ ಅಧ್ಯಕ್ಷರ ಆಯ್ಕೆ ನಡೆಸಲಾಗಿದೆ.
ಘಟಾನುಘಟಿಗಳ ಪೈಪೋಟಿ
ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ಹುದ್ದೆಗೆ ಸುಮಾರು 30 ಆಕಾಂಕ್ಷಿಗಳಿದ್ದರು. ಈ ಪೈಕಿ ಕೆಲವರದ್ದು ಹೈಕಮಾಂಡ್ ತನಕ ನೆಟ್‌ವರ್ಕ್ ಕೂಡ ಇತ್ತು. ಕೊನೆಯ ಹಂತದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಧ್ಯೆ ಪೈಪೋಟಿ ಇದೆ ಎಂದು ಹೇಳಲಾಗಿತ್ತು. ಈ ಪೈಕಿ ಒಬ್ಬರು ಜಿಲ್ಲಾ ಅಧ್ಯಕ್ಷರಾಗುವುದು ಪಕ್ಕಾ ಎಂದೇ ಚರ್ಚೆಯಾಗುತಿತ್ತು. ಆದರೆ ಹೈಕಮಾಂಡ್ ಬೇರೆಯ್ದೇ ಲೆಕ್ಕಾಚಾರ ಮಾಡಿದ್ದು, ಯುವ ನಾಯಕನಿಗೆ ಪಟ್ಟ ಕಟ್ಟಿದೆ.
ಯೋಗೇಶ್ ಮುಂದೆ ಸವಾಲುಗಳು
ಹೆಚ್.ಸಿ.ಯೋಗೇಶ್ ಅವರ ತಂದೆ ಹೆಚ್.ಎಂ.ಚಂದ್ರಶೇಖರಪ್ಪ ಅವರು ಶಿವಮೊಗ್ಗ ಶಾಸಕರಾಗಿದ್ದರು. ಇನ್ನೊಂದೆಡೆ, ಯೋಗೇಶ್ ಅವರು ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಪಾಲಿಕೆ ಸದಸ್ಯರಾಗಿಯು ಅನುಭವವಿದೆ. ಹಾಗಾಗಿ ಸಂಘಟನೆ ಮತ್ತು ಆಡಳಿತ ಎರಡರ ತಿಳಿವಳಿಕೆ ಯೋಗೇಶ್ ಅವರಿಗಿದೆ. ಇವು ಪಕ್ಷ ಸಂಘಟನೆ ಮತ್ತು ಕಾಂಗ್ರೆಸ್‌ನ ಇಮೇಜ್ ವೃದ್ಧಿಸುವ ಕಾರ್ಯಕ್ಕೆ ಅನುಕೂಲ ಆಗಬಹುದು.
ನೂತನ ಜಿಲ್ಲಾ ಅಧ್ಯಕ್ಷರಿಗೆ ಈ ಬಾರಿ ಸಾಲು ಸಾಲು ಸವಾಲುಗಳು ಇದ್ದಾವೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣಗಳ ಸಂಖ್ಯೆ ದೊಡ್ಡದಿದೆ. ವೈಮನಸ್ಸು ಹೊಂದಿರುವವರನ್ನು ಒಗ್ಗೂಡಿಸಿ ಪಕ್ಷದ ಸಂಘಟನೆ ಮಾಡುವುದು ದೊಡ್ಡ ಸವಾಲು. ಇನ್ನು, ಸಾಲು ಸಾಲು ಚುನಾವಣೆಗಳಿಗೆ ಸಿದ್ಧತೆ ನಡೆಸಬೇಕಿದೆ. ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯುವ ಸಾದ್ಯತೆ ಇದೆ. ಮಹಾನಗರ ಪಾಲಿಕೆಗು ಎಲೆಕ್ಷನ್ ಘೋಷಣೆ ಆಗಬಹುದು. ಇದರ ಬೆನ್ನಿಗೆ ವಿಧಾನ ಸಭೆ ಚುನಾವಣೆಯು ನಡೆಯಲಿದೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬೂಸ್ಟ್ ನೀಡುವುದು ಯೋಗೇಶ್ ಅವರಿಗಿರುವ ಬೃಹತ್ ಸವಾಲು. ಇವುಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬದು ಸದ್ಯದ ಕುತೂಹಲ.