ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜನವರಿ 2022
ಕಿಮ್ಮನೆ ರತ್ನಾಕರ್ ಅವರಿಗೆ ನಂದಿತಾ ಪ್ರಕರಣದಿಂದಾಗಿ ಸೋಲಾಯಿತು ಎಂಬ ಪಾಪಪ್ರಜ್ಞೆ ಕಾಡುತ್ತಿದೆ. ಆದ್ದರಿಂದ ಈ ವಿಚಾರವನ್ನು ಮುಂದಿಟ್ಟುಕೊಂಡು ಮತ್ತೆ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.
ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಗೃಹ ಸಚಿವ ಆರಗ ಜ್ಞಾನೇಂದ್ರ, ತಮ್ಮ ರಾಜಕೀಯ ಬದುಕು, ಸಚಿವ ಸ್ಥಾನದ ಪ್ರಮುಖ ವಿಚಾರಗಳನ್ನು ಹಂಚಿಕೊಂಡರು.
ಹೋಮ್ ಮಿನಿಸ್ಟರ್ ಹೇಳಿದ್ದೇನು?
♦ಹೆಸರಿಗಷ್ಟೆ ಮಂತ್ರಿ ಅಲ್ಲ
‘ಹೆಸರಿಗೊಬ್ಬ ಮಂತ್ರಿ ಆಗಬಾರದು ಎಂಬುದು ನನ್ನ ಗುರಿ. ಅದಕ್ಕಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.
ಗಾಂಜಾ, ಮಾದಕ ವಸ್ತುಗಳ ಸೇವನೆ ನಿದ್ದೆಗಿಡಿಸಿದೆ. ಯುವ ಸಮೂಹದಲ್ಲಿ ಮಾದಕ ವಸ್ತುಗಳ ಸೇವನೆ ದೊಡ್ಡ ಪಿಡುಗಾಗಿದೆ.’
♦ಆಂಧ್ರದಿಂದ ಬರುತ್ತಿದೆ ಗಾಂಜಾ
‘ಶಿವಮೊಗ್ಗಕ್ಕೆ ಆಂಧ್ರದಿಂದ ಗಾಂಜಾ ಸರಬರಾಜು ಮಾಡಲಾಗುತ್ತಿತ್ತು. ಸುಮಾರು 200 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಗಾಂಜಾ ಸೇವನೆ ಮಾಡುವವರ ವಿರುದ್ಧ 160 ಕೇಸ್ ಹಾಕಲಾಗಿದೆ. 72 ಜನರನ್ನು ಕಸ್ಟಡಿಗೆ ಹಾಕಲಾಗಿದೆ. ಹಾಗಾಗಿ ಬಹಳ ಜನ ಗಾಂಜಾ ಸೇವನೆ ಬಿಟ್ಟಿದ್ದಾರೆ.’
♦’ನಂದಿತಾ ಕೇಸ್, ಆರೋಪಿಗಳ ರಕ್ಷಣೆ’
‘ನಂದಿತಾ ಪ್ರಕರಣದಲ್ಲಿ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಲು ಅವರು ಹೆಚ್ಚು ಪ್ರಭಾವ ಬೀರಿದ್ದಾರೆ. 300ಕ್ಕೂ ಹೆಚ್ಚು ಜನರ ಮೇಲೆ ಕೇಸ್ ದಾಖಲಾಗಿದೆ. ಆರೋಪಿಗಳ ರಕ್ಷಿಸುವ ಕೆಲಸ ಮಾಡಿದ್ದರು. ವೋಟ್ ಬ್ಯಾಂಕ್ಗೆ ತೊಡಕಾಗಲಿದೆ ಎಂದು ಆಗ ಹೋರಾಟ ಮಾಡಿದ್ದರು. ಈಗ ಅವರೆ ಸಿಬಿಐಗೆ ವಹಿಸಿ ಅನ್ನುತ್ತಿದ್ದಾರೆ.’
♦ಪಾಪ ಪ್ರಜ್ಞೆ ಕಾಡುತ್ತಿದೆ
‘ಸಾಕ್ಷಿಗಳು ಸರ್ವನಾಶವಾಗಿ, ಮಣ್ಣು ಹಿಡಿದಿದೆ. ಈಗ ಸಿಬಿಐಗೆ ವಹಿಸುವಂತೆ ಕೇಳುತ್ತಿದ್ದಾರೆ. ನಂದಿತಾ ಪ್ರಕರಣದಿಂದ ಸೋಲಾಗಿದೆ ಎಂಬ ಪಾಪ ಪ್ರಜ್ಞೆ ಕಾಡುತ್ತಿದೆ. ಹಾಗಾಗಿ ಈಗ ಅದೇ ಪ್ರಕರಣ ಪ್ರಸ್ತಾಪಿಸಿ ಗೆಲವು ಸಾಧಿಸಲು ಹೊರಟಂತಿದೆ.’
♦ಅಡಕೆ ಸಂಶೋಧನೆ ಮಧ್ಯಂತರ ವರದಿ
‘ಅಡಕೆಯಲ್ಲಿ ಔಷಧೀಯ ಗುಣ ಇದೆ ಎಂದು ಸಾಬೀತು ಮಾಡಲು ಸಂಶೋಧನೆ ನಡೆಸಲಾಗುತ್ತಿದೆ. ಎಂ.ಎಸ್.ರಾಮಯ್ಯ ಸಂಸ್ಥೆಯಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಈಗಾಗಲೆ ಮಧ್ಯಂತರ ವರದಿ ಬಂದಿದೆ. ಸದ್ಯದಲ್ಲೆ ಪೂರ್ಣ ವರದಿ ಬರಲಿದೆ’.
ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ ನೇರಿಗೆ, ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ ಯಡಗೆರೆ ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200