‘ಎಸ್‌ಐಆರ್‌ ಬಗ್ಗೆ ಎಚ್ಚರಿಕೆ ಅಗತ್ಯ’, ಮಾಜಿ ಮಿನಿಸ್ಟರ್‌ ಕಿಮ್ಮನೆ ರತ್ನಾಕರ್‌ ಏನೆಲ್ಲ ಹೇಳಿದರು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ‘ದಲಿತರನ್ನು ಹಾಗೂ ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ದೊಡ್ಡ ಹುನ್ನಾರ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಡಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಕೇವಲ ಒಂದು ತಿಂಗಳ ಅವಧಿಯಲ್ಲಿ ಎಸ್‌ಐಆರ್ ಮಾಡಲು ಹೊರಟಿರುವುದು ಅಲ್ಪಸಂಖ್ಯಾತರು ಮತ್ತು ದಲಿತರ ಹಕ್ಕನ್ನು ಕಸಿದುಕೊಂಡಂತಾಗುತ್ತಿದೆ. ಈ ಪ್ರಕ್ರಿಯೆಗೆ ಕನಿಷ್ಠ ಆರು ತಿಂಗಳು ಕಾಲವಕಾಶ ನೀಡಬೇಕಿತ್ತು. ಕೇಂದ್ರ ಸರ್ಕಾರದ ಈ ಆತುರದ ನಿರ್ಧಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ 91 ಲಕ್ಷ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದು, 21 ಲಕ್ಷ ಮತದಾರರ ತಕರಾರು ಅರ್ಜಿಗಳು ಇನ್ನೂ ಬಾಕಿ ಇವೆ’ ಎಂದು ಆತಂಕ ವ್ಯಕ್ತಪಡಿಸಿದರು.

Kimmane-Rathnakar-General-Image

‘ಚುನಾವಣಾ ಆಯೋಗ ಉಲ್ಲೇಖಿಸಿರುವ 12 ದಾಖಲೆಗಳಲ್ಲಿ ಹೆಸರಿನ ಸಾಮ್ಯತೆ ಇಲ್ಲದಿದ್ದರೆ ಅಥವಾ ಕನ್ನಡ ಕಾಗುಣಿತ ಹಾಗೂ ಇಂಗ್ಲಿಷ್ ಸ್ಪೆಲಿಂಗ್‌ನಲ್ಲಿ ಸಣ್ಣ ವ್ಯತ್ಯಾಸವಾದರೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುತ್ತದೆ. ಇಂತಹ ತಾಂತ್ರಿಕ ಸೂಕ್ಷ್ಮತೆಗಳಿರುವಾಗ ದೇಶದ ಅತ್ಯಂತ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯಗಳಿಗೆ ಈ ಮಾಹಿತಿಯಾದರೂ ಹೇಗೆ ತಲುಪಲು ಸಾಧ್ಯ? ಎಸ್‌ಐಆರ್ ಮೂಲಕ ಜನರನ್ನು ಮತದಾನದ ಹಕ್ಕಿನಿಂದ ಆಚೆ ಇಡುವ ಇಂತಹ ಕೆಟ್ಟ ಆಲೋಚನೆಗಳು ಬಿಜೆಪಿಗೆ ಮಾತ್ರ ಬರಲು ಸಾಧ್ಯ. ಸದ್ಯ ನ್ಯಾಯಾಲಯಗಳು ಕೂಡ ಇಂತಹ ಜನವಿರೋಧಿ ಕೆಲಸಗಳಿಗೆ ಸಹಕಾರ ನೀಡುತ್ತಿರುವುದರಿಂದ ಜನಸಾಮಾನ್ಯರು ನ್ಯಾಯಾಂಗದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಬಿಜೆಪಿ ಸರ್ಕಾರವು ಜಾತಿ ಮತ್ತು ಧರ್ಮವನ್ನು ರಾಜಕೀಯಕ್ಕೆ ತಂದು ಇಡೀ ರಾಜಕಾರಣದ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ. ದೇಶವನ್ನು ಇನ್ನೊಂದು ಅಫ್ಘಾನಿಸ್ತಾನ್ ಹಾಗೂ ತಾಲಿಬಾನ್ ಮಾಡಲು ಹೊರಟಿದೆ’ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಪ್ರಮುಖರಾದ ಶಿವಕುಮಾರ್, ಇಸ್ಮಾಯಿಲ್‌ ಖಾನ್, ಶ್ವೇತಾ ಬಂಡಿ, ಸೈಯದ್ ವಾಹಿದ್ ಅಡ್ಡು, ಯು.ಶಿವಾನಂದ್ ಹಾಗೂ ಎಸ್.ಟಿ. ಹಾಲಪ್ಪ ಉಪಸ್ಥಿತರಿದ್ದರು.