ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಆಗಸ್ಟ್ 2021
ಬಸವರಾಜ ಬೊಮ್ಮಾಯಿ ಅವರ ಕ್ಯಾಬಿನೆಟ್ನಲ್ಲಿ ಶಿವಮೊಗ್ಗ ಜಿಲ್ಲೆಯ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲಕ್ಕೆ ಬಹುತೇಕ ತೆರೆ ಬಿದ್ದಂತಾಗಿದೆ. ಶಿವಮೊಗ್ಗ ಜಿಲ್ಲೆಯ ಒಬ್ಬರಿಗಷ್ಟೆ ಸ್ಥಾನ ಸಿಗಲಿದೆ.
ಇವತ್ತು ಮಧ್ಯಾಹ್ನ ಬೆಂಗಳೂರಿನಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಪ್ರಮಾಣ ವಚನ ಕೈಗೊಳ್ಳುವಂತೆ ಜಿಲ್ಲೆಯ ಒಬ್ಬ ಶಾಸಕರಿಗೆ ಮಾತ್ರ ಕರೆ ಬಂದಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
ಯಾರಿಗೆ ಬಂದಿದೆ ಸಿಎಂ ಫೋನ್ ಕರೆ?
ಶಿವಮೊಗ್ಗ ನಗರದ ಶಾಸಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ಮಾಡಿದ್ದು, ಪ್ರಮಾಣ ವಚನ ಸ್ವೀಕರಿಸುವಂತೆ ತಿಳಿಸಿದ್ದಾಗಿ ಗೊತ್ತಾಗಿದೆ. ಹಿರಿಯ ಶಾಸಕರು, ಸಚಿವರಾಗಿ ಖಾತೆಗಳನ್ನು ನಿಭಾಯಿಸಿದ ಅನುಭವವಿದೆ. ಸಂಘಟನೆಯೊಂದಿಗೆ ತೊಡಗಿಸಿಕೊಂಡಿದ್ದನ್ನೆಲ್ಲೆ ಆಧಾರವಾಗಿಟ್ಟುಕೊಂಡು, ಈಶ್ವರಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪುತ್ರನ ಆಡಿಯೋ ವೈರಲ್
ಮತ್ತೊಂದೆಡೆ ಕೆ.ಎಸ್.ಈಶ್ವರಪ್ಪ ಅವರು ಪ್ರಮಾಣವಚನ ಸ್ವೀಕರಿಸುವ ಸಂಬಂಧ ಅವರ ಪುತ್ರ ಕೆ.ಈ.ಕಾಂತೇಶ್ ಅವರು ಕಾರ್ಯಕರ್ತರಿಗೆ ಮಾಹಿತಿ ನೀಡಿರುವ ಆಡಿಯೊ ವೈರಲ್ ಆಗಿದೆ. ‘ಆತ್ಮೀಯ ಕಾರ್ಯಕರ್ತ ಬಂಧುಗಳೆ. ಬಸವರಾಜ ಬೊಮ್ಮಾಯಿ ಅವರು ಕರೆ ಮಾಡಿ ಮಧ್ಯಾಹ್ನ 2.15ಕ್ಕೆ ಪ್ರಮಾಣವಚನ ಸ್ವೀಕರಿಸುವಂತೆ ಕೋರಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ತಂದೆಯವರಾದ ಈಶ್ವರಪ್ಪನವರು ಮತ್ತೊಮ್ಮೆ ಮಂತ್ರಿಯಾಗಿ ಬರುತ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಈಶ್ವರಪ್ಪನವರ ಮೇಲಿರಬೇಕು’ ಎಂದು ಕಾಂತೇಶ್ ಅವರು ಆಡಿಯೋದಲ್ಲಿ ಮನವಿ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆ
ಇತ್ತ ಕೆ.ಎಸ್.ಈಶ್ವರಪ್ಪ ಅವರು ಮತ್ತೊಮ್ಮೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಕುರಿತು ಮಾಹಿತಿ ಬಹಿರಂಗೊಳ್ಳುತ್ತಿದ್ದಂತೆ ಅವರ ಬೆಂಬಲಿಗರು, ಕಾರ್ಯಕರ್ತರು ಸಂತಸಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆ ಸಲ್ಲಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಹೊಸಬರಿಗೆ ಅವಕಾಶ ಸಿಗಲಿದೆ ಎಂಬ ಲೆಕ್ಕಾಚಾರವಿತ್ತು. ಆದರೆ ಹೈಕಮಾಂಡ್ ಸಚಿವ ಸ್ಥಾನ ನಿಭಾಯಿಸಿದ ಅನುಭವಕ್ಕೆ ಆದ್ಯತೆ ನೀಡಿದಂತಾಗಿದೆ. ಕೊನೆ ಹಂತದ ಬದಲಾವಣೆ ಹೊರತುಪಡಿಸಿ, ಈತನಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರೊಬ್ಬರೆ ಸಂಪುಟ ಸೇರುವುದು ಖಚಿತಗೊಂಡಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200