ಶಿವಮೊಗ್ಗ ಲೈವ್.ಕಾಂ | ಬೆಂಗಳೂರು
ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿ ಮರು ವಿಂಗಡಣೆ, ಶರಾವತಿ ಸಂತ್ರಸ್ತರ ಪುನರ್ವಸತಿ ಹಾಗೂ ಕೊಡಚಾದ್ರಿ ಕೇಬಲ್ ಕಾರ್ ಯೋಜನೆಗೆ ವೇಗ ನೀಡುವಂತೆ ಕೋರಿ ಸಂಸದ ಬಿ.ವೈ.ರಾಘವೇಂದ್ರ ಅವರು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅರಣ್ಯ ಭೂಮಿ, ವನ್ಯಜೀವಿ ಧಾಮಗಳ ಗಡಿ ಗುರುತಿಸುವಿಕೆ ಹಾಗೂ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ದೀರ್ಘಕಾಲದ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸಬೇಕೆಂದು ಸಂಸದರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಕ್ಷಣವೇ ನಿರ್ದೇಶನ ನೀಡುವಂತೆ ಸಚಿವರಿಗೆ ಮನವಿ ಮಾಡಲಾಗಿದೆ.

ಗಡಿ ಮರು ವಿಂಗಡಣೆ
ರಾಜ್ಯ ಸರ್ಕಾರ ಶೆಟ್ಟಿಹಳ್ಳಿ ವನ್ಯಜೀವಿಧಾಮದ 397.96 ಚದರ ಕಿ.ಮೀ ವ್ಯಾಪ್ತಿಯ ಗಡಿ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿ, ಬಫರ್ ಝೂನ್ ಗಡಿ ತಿದ್ದುಪಡಿಗೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಶಿಫಾರಸು ಕಳುಹಿಸಬೇಕು ಎಂದು ಮನವಿ ಮಾಡಿದರು.
ತಕ್ಷಣ ಸ್ಥಳ ಪರಿಶೀಲನೆಗೆ ಮನವಿ
ದಶಕಗಳಿಂದ ಬಾಕಿಯಿರುವ ಶರಾವತಿ ಸಂತ್ರಸ್ತರ ಪುನರ್ವಸತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿಗೆ ತಕ್ಷಣವೇ ಸ್ಥಳ ಪರಿಶೀಲನೆ ಪೂರ್ಣಗೊಳಿಸಿ ಪ್ರಸ್ತಾವನೆ ಸಲ್ಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಮೈಸೂರು ಪೇಪರ್ ಮಿಲ್ಸ್ ಅರಣ್ಯ ವ್ಯಾಪ್ತಿಯಲ್ಲಿ ಮರ ತೆರವುಗೊಳಿಸುವ ನಿರ್ವಹಣಾ ಯೋಜನೆಗೆ ಆದ್ಯತೆಯ ಮೇರೆಗೆ ಅನುಮೋದನೆ ದೊರಕಿಸಿಕೊಡುವಂತೆ ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿ 766ಸಿ (ಬೆಕ್ಕೋಡಿ ಯೋಜನೆ) ಅಡಿಯಲ್ಲಿ ಹೊಸನಗರದ ಮಾವಿನಕೊಪ್ಪ ವೃತ್ತದಿಂದ ಅಡುಗೋಡಿವರೆಗಿನ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಯ ಎರಡನೇ ಹಂತದ ಅನುಮೋದನೆ ಪ್ರಸ್ತಾವನೆಯನ್ನು ತಕ್ಷಣವೇ ಸಲ್ಲಿಸಲು ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶಿಸಬೇಕು.
ಕೇಬಲ್ ಕಾರ್‌ಗೆ ಶಿಫಾರಸು ಪತ್ರ
ಕೊಡಚಾದ್ರಿ ಬೆಟ್ಟದಿಂದ ಕೊಲ್ಲೂರಿಗೆ ಪ್ರವಾಸಿಗರ ಸುಲಭ ಸಂಚಾರಕ್ಕಾಗಿ ನಿರ್ಮಿಸಲು ಉದ್ದೇಶಿಸಿರುವ ಕೇಬಲ್ ಕಾರ್ ಯೋಜನೆಗೆ ಪರಿಸರ ಮತ್ತು ವನ್ಯಜೀವಿ ಮಂಜೂರಾತಿಯ ಶಿಫಾರಸು ಪತ್ರ ಬಾಕಿಯಿದೆ. ಹಂತ-1ರ ಅನುಮೋದನೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸಚಿವ ರಾಮಲಿಂಗಾರೆಡ್ಡಿ ಅವರು ಸಂಸದರ ಕೋರಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಈ ವೇಳೆ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಉಪಸ್ಥಿತರಿದ್ದರು.