SHIVAMOGGA LIVE NEWS | 20 SEPTEMBER 2023
SHIMOGA : ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೈಪೋಟಿ ಒಡ್ಡುತ್ತಿದ್ದ ಜೆಡಿಎಸ್ ಪಕ್ಷ (Party) ಈಗ ನಾವಿಕನಿಲ್ಲದ ದೋಣಿಯಂತಾಗಿದೆ. ಪಕ್ಷದ ಮುಖಂಡರೆಲ್ಲ ಕಾಂಗ್ರೆಸ್, ಬಿಜೆಪಿ ಪಾಲಾಗುತ್ತಿದ್ದಾರೆ. ಈಗ ಜಿಲ್ಲಾಧ್ಯಕ್ಷರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಹಾಗಾಗಿ ಜೆಡಿಎಸ್ನ ಭವಿಷ್ಯವೇನು ಎಂಬ ಚಿಂತೆ ಕಾರ್ಯಕರ್ತರನ್ನು ಆವರಿಸಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಸದ್ಯ ಪಕ್ಷ ಸೇರ್ಪಡೆಯಾಗಿ, ಪ್ರಾಥಮಿಕ ಸದಸ್ಯತ್ವ ಪಡೆಯುವುದೊಂದೆ ಬಾಕಿ ಇದೆ.
ನಾವಿಕನಿಲ್ಲದ ದೋಣಿಯಾದ ಜೆಡಿಎಸ್
ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹು ವರ್ಷದಿಂದ ಜನತಾ ಪರಿವಾರ ಪ್ರಬಲ ಪೈಪೋಟಿ ಒಡ್ಡುತ್ತಲೆ ಬಂದಿದೆ. ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿವರೆಗೆ, ಪಟ್ಟಣ ಪಂಚಾಯಿತಿಗಳಿಂದ ಮಹಾನಗರ ಪಾಲಿಕೆವರೆಗೆ, ಕೊನೆಗೆ ಶಾಸಕ ಸ್ಥಾನಕ್ಕು ಇತರೆ ಪಕ್ಷಗಳಿಗೆ ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲ ಸ್ಪರ್ಧೆ ಒಡ್ಡಿದೆ. ಈ ಹಾದಿಯಲ್ಲಿ ಹಲವು ನಾಯಕರು ಬಂದು ಹೋದರು. ಆದರೆ ಎರಡು ದಶಕಕ್ಕು ಹೆಚ್ಚು ಸಮಯದಿಂದ ಎಂ.ಶ್ರೀಕಾಂತ್ ಪಕ್ಷದ ಬೆನ್ನಲುಬಾಗಿ ನಿಂತಿದ್ದರು.
ಪಕ್ಷವನ್ನು ಚುನಾವಣೆಗಳಿಗೆ ಅಣಿಗೊಳಿಸುವುದು ಸುಲಭದ ಸಂಗತಿಯಲ್ಲ. ಕಾರ್ಯಕರ್ತರ ಸಂಖ್ಯಾ ಬಲದ ಜೊತೆಗೆ ಆರ್ಥಿಕ ಬಲವು ಬೇಕು. ಕಳೆದ ಎರಡು ದಶಕದಲ್ಲಿ ಎಂ.ಶ್ರೀಕಾಂತ್ ತಮ್ಮ ಸ್ವಂತ ವರ್ಚಸ್ಸಿನಿಂದ ಪಕ್ಷಕ್ಕೆ ಬಲ ತುಂಬಿದ್ದರು. ಈ ಹಿಂದೆ ಸತತ ಎಂಟು ವರ್ಷ ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದರು. ಆ ಅವಧಿಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಮೂರು ಶಾಸಕ ಸ್ಥಾನ ಗೆದ್ದಿತ್ತು. ಕೆಲ ಸಮಯ ಶ್ರೀಕಾಂತ್ ಅವರಿಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ವಹಿಸಲಾಗಿತ್ತು. ಆಗ ಪಕ್ಷದ ಸಂಘಟನೆ ಕುಸಿತ ಕಂಡಿತು. ಕೊನೆಗೆ 2021ರ ನವೆಂಬರ್ನಲ್ಲಿ ಪುನಃ ಜೆಡಿಎಸ್ ಜಿಲ್ಲಾಧ್ಯಕ್ಷ ಜವಾಬ್ದಾರಿ ನೀಡಲಾಯಿತು. 2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿತು. ಮತ್ತೊಂದು ಕ್ಷೇತ್ರದಲ್ಲಿ ಸ್ವಲ್ಪ ಅಂತರದಲ್ಲಿ ಸೋಲಾಯಿತು.
ಮುಂದೇನು ಜೆಡಿಎಸ್ ಪಕ್ಷದ ಕಥೆ?
ಜಿಲ್ಲಾಧ್ಯಕ್ಷರೆ ಪಕ್ಷ ತೊರೆಯುತ್ತಿರುವುದು ಜೆಡಿಎಸ್ ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕಿಸಿದೆ. ಪ್ರಬಲ ನಾಯಕರಿಲ್ಲದೆ ಜಿಲ್ಲಾ ಜೆಡಿಎಸ್ ಸೊರಗುತ್ತಿದೆ. ಸದ್ಯ ಶಿವಮೊಗ್ಗ ಗ್ರಾಮಾಂತರದಲ್ಲಿ ಶಾಸಕಿ ಮತ್ತು ವಿಧನಸಭೆ ಉಪ ನಾಯಕಿ ಶಾರದಾ ಪೂರ್ಯಾನಾಯ್ಕ್ ಮತ್ತು ಭದ್ರಾವತಿಯಲ್ಲಿ ಶಾರದಾ ಅಪ್ಪಾಜಿಗೌಡ ಅವರು ಪಕ್ಷಕ್ಕೆ ಆಸರೆ. ಆದರೆ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಈ ನಾಯಕಿಯರಿಗೆ ಸುಲಭದ ಸಂಗತಿಯಲ್ಲ. ವಿಧಾನಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಕೆ.ಬಿ.ಪ್ರಸನ್ನ ಕುಮಾರ್ ಅವರಿಗೆ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ. ಆದರೆ ಪ್ರಸನ್ನ ಕುಮಾರ್ ಹೆಚ್ಚು ದಿನ ಪಕ್ಷದಲ್ಲಿ ಉಳಿಯುವುದಿಲ್ಲ ಎಂದು ಕಾರ್ಯಕರ್ತರು ಚರ್ಚೆ ನಡೆಸುತ್ತಿದ್ದಾರೆ. ಇದೆ ಕಾರಣಕ್ಕೆ ಪಕ್ಷದ ಭವಿಷ್ಯದ ಕುರಿತು ಕಾರ್ಯಕರ್ತರು ಚಂತೆಗೀಡಾಗಿದ್ದಾರೆ.
ಬಿಜೆಪಿ ಜೊತೆಗಿನ ಮೈತ್ರಿ ಸಂಕಷ್ಟ
ಇವೆಲ್ಲದರ ಮಧ್ಯೆ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ವಿಚಾರ ಕಾರ್ಯಕರ್ತರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ತೀವ್ರ ಪ್ರಚಾರ ನಡೆಸಿದ್ದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಇತ್ತು. ಶಿವಮೊಗ್ಗ ನಗರದಲ್ಲಿಯು ಇದೆ ಪರಿಸ್ಥಿತಿ ಇತ್ತು. ಈಗ ಹೈಕಮಾಂಡ್ ಮಟ್ಟದಲ್ಲಿ ಬಿಜೆಪಿ ಜೊತೆಗೆ ಸ್ನೇಹ ಬೆಸೆದುಕೊಳ್ಳುತ್ತಿರುವ ವಿಚಾರ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮ ವಿರೋಧಿ ಸಿದ್ಧಾಂತ ಮತ್ತು ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಈ ಹಿನ್ನೆಲೆ ರಾಜಕೀಯ ಭವಿಷ್ಯದ ಕುರಿತು ಪುನರ್ ಪರಿಶೀಲನೆ ಮಾಡುವ ಸ್ಥಿತಿ ಉಂಟಾಗಿದೆ.
ಇದನ್ನೂ ಓದಿ – ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್, ವೈರಲ್ ಆಯ್ತು ಫೋಟೋ, ಯಾವಾಗ ಸೇರ್ಪಡೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200