ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 NOVEMBER 2022
ಶಿವಮೊಗ್ಗ : ಶರಾವತಿ ಯೋಜನೆ ಸಂತ್ರಸ್ಥರ ನೆರವಿಗೆ ನಿಲ್ಲಬೇಕಿದ್ದ ಸರ್ಕಾರ ಹೈಕೋರ್ಟ್ ಆದೇಶವನ್ನು ಮುಂದೆ ಇಟ್ಟುಕೊಂಡು ಕೈತೊಳೆದುಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. (siddaramaiah at sharavati protest)
ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಕಾಂಗ್ರೆಸ್ ಜಾಗ್ರತಾ ಸಮಿತಿ ಆಯೋಜಿಸಿದ್ದ ಮಲೆನಾಡ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಅವರು ಸಂತ್ರಸ್ಥರಿಗೆ ನ್ಯಾಯ ಕೊಡಿಸುತ್ತೇನೆ ಅಂದಿದ್ದರು. ಆದರೆ ಅದಕ್ಕೆ ಪ್ರಾಮಾಣಿಕ ಪ್ರಯತ್ನವೇ ಅಗಲಿಲ್ಲ ಎಂದು ಟೀಕಿಸಿದರು.
(siddaramaiah at sharavati protest)
ಸಂತ್ರಸ್ಥರಾರು ಪ್ರತಿವಾದಿಗಳೇ ಆಗಿರಲಿಲ್ಲ
ತಾವು ಮುಖ್ಯಮಂತ್ರಿ ಆಗಿದ್ದಾಗ 2015ರಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆಯನ್ನು ಗಮನಕ್ಕೆ ತಂದರು. ಆಗ ಪ್ರಿನ್ಸಿಪಲ್ ಸೆಕ್ರಟರಿ ಆಗಿದ್ದ ಮದನ್ ಗೋಪಾಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಹಲವು ಸಭೆಗಳು ನಡೆದವು. ಆಗ ವಿಧಾನ ಸಭೆ ಅಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಕೂಡ ಸಮಿತಿಗೆ ಸಲಹೆ ನೀಡಿದ್ದರು. ಆ ಸಮಿತಿಯು ಕೇಂದ್ರ ಸರ್ಕಾರದ ಅನುಮತಿ ಬೇಕಿಲ್ಲ ಎಂದು ತಿಳಿಸಿತ್ತು. ಅದರ ಆಧಾರದ ಮೇಲೆ ಹಕ್ಕು ಪತ್ರ ನೀಡಿದ್ದೆವು ಎಂದರು.
ಗಿರೀಶ್ ಆಚಾರ್ ಎಂಬುವವರು ಹೈಕೋರ್ಟ್ ಗೆ ಹೋಗಿದ್ದಾರೆ. ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ನೋಟಿಫಿಕೇಷನ್ ವಜಾಗೊಳಿಸಿದೆ. ಆದರೆ ಈ ಪ್ರಕರಣದಲ್ಲಿ ಸಂತ್ರಸ್ಥರಾರೂ ಪ್ರತಿವಾದಿಗಳಾಗಿರಲಿಲ್ಲ. ಈಗ ಇದೆ ಆದೇಶ ಮುಂದಿಟ್ಟುಕೊಂಡು ನೆರವು ನೀಡುವ ಬದಲು ಸರ್ಕಾರ ಕೈ ತೊಳೆದುಕೊಂಡಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
(siddaramaiah at sharavati protest)
ಸರ್ಕಾರಕ್ಕೆ ಕಣ್ಣು, ಕವಿ, ಹೃದಯವಿಲ್ಲ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಜಮೀನು ಕಳೆದುಕೊಂಡವರಿಗೆ ನಿವೇಶನ, ಮನೆ, ರಸ್ತೆ ನಿರ್ಮಿಸಿಕೊಡಬೇಕು ಎಂದು ಆದೇಶವಿದೆ. ಆದರೆ ಯಾರೋ ಒಬ್ಬರು ನ್ಯಾಯಾಲಯಕ್ಕೆ ಹೋದರು ಎಂಬ ಕಾರಣಕ್ಕೆ ಸರ್ಕಾರ 56 ಅಧಿಸೂಚನೆಗಳನ್ನು ಹಿಂಪಡೆದಿದೆ. ಈ ಸರ್ಕಾರಕ್ಕೆ ಕಣ್ಣು, ಕವಿ, ಹೃಯವಿಲ್ಲ ಅನ್ನುವುದಕ್ಕೆ ಇದೆ ಸಾಕ್ಷಿ ಎಂದರು.
ರೈತರು ಆತಂಕ ಪಡುವುದು ಬೇಡ. ಯಾರೊಬ್ಬರು ಜಮೀನು ಬಿಡಬೇಡಿ. ಅರಣ್ಯ ಭೂಮಿಯನ್ನು ಹಂಚಿಕೆ ಮಾಡಬಾರದು ಎಂದು ಕಾನೂನಿನಲ್ಲಿ ಇಲ್ಲ. ಕೈಗಾರಿಕೆಗಳು, ವಿದ್ಯುತ್ ಯೋಜನೆಗಳಿಗೆ ಅರಣ್ಯ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಕಂದಾಯ ಭೂಮಿ ಹಂಚಿಕೆ ಮಾಡಬೇಕು ಎಂದು ಹೊಸ ಕಾನೂನು ಹೇಳುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದರು.
ಈ ಸರ್ಕಾರ ರೈತರ ಪಾಲಿಗೆ ಶಾಪವಾಗಿದೆ. ಯಡಿಯೂರಪ್ಪ ಅವರು ನಡಿದಂತೆ ನಡೆಯಲು ಸಾದ್ಯವಾಗುತ್ತಿಲ್ಲ. ಹಸಿರು ಶಾಲು ಹೊದ್ದು ಅಧಿಕಾರ ಸ್ವೀಕರಿಸಿ ರೈತರ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ALSO READ – ಆಯನೂರಿನಿಂದ ಶರಾವತಿ ಸಂತ್ರಸ್ಥರ ಪಾದಯಾತ್ರೆ ಶುರು, ಹೇಗಿದೆ? ಯಾರೆಲ್ಲ ಇದ್ದಾರೆ?
ರೈತರಿಂದ ಕಮಿಷನ್ ಬರುವುದಿಲ್ಲ
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು, ಯಾವುದಾದರು ಕಾಮಗಾರಿಗಳಾದರೆ ಶೇ.40ರಷ್ಟು ಕಮಿಷನ್ ಪಡೆಯಬಹುದು. ಆದರೆ ರೈತರಿಗೆ ಭೂಮಿ ಹಕ್ಕು ನೀಡಿದರೆ ಅದರಲ್ಲಿ ಕಮಿಷನ್ ಬರುವುದಿಲ್ಲ. ಇದೆ ಕಾರಣಕ್ಕೆ ಬಿಜೆಪಿ ಮುಖಂಡರು ಭೂಮಿ ಹಕ್ಕು ಕೊಡಲು ಸಿದ್ಧರಿಲ್ಲ. ನಿರಂತರ ಹೋರಾಟದ ಮೂಲಕ ಭೂಮಿ ಹಕ್ಕು ಪಡೆಯಬೇಕಿದೆ ಎಂದರು.
ಕಾರ್ಯಾಧ್ಯಕ್ಷ ಧೃವನಾರಾಯಣ ಅವರು ಮಾತನಾಡಿ, ಶರಾವತಿ ಸಂತ್ರಸ್ಥರು, ಅಡಕೆ ಬೆಳೆಗಾರರು ಮತ್ತು ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಅವರ ನೆರವಿಗೆ ಸರ್ಕಾರ ಧಾವಿಸಬೇಕಿದೆ. ಆದರೆ ತೀರ್ಥಹಳ್ಳಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದಾಸೀನ ತೋರಿಸಿದ್ದಾರೆ ಎಂದರು.
ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮೆನೆ ರತ್ನಾಕರ್, ಹೆಚ್.ಎಂ.ರೇವಣ್ಣ, ಶಾಸಕ ಸಂಗಮೇಶ್ವರ್, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಬೇಳೂರು ಗೋಪಾಲಕೃಷ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422