ಶಿವಮೊಗ್ಗ: ದೇಶದ ಜನಜಾತಿ (ಬುಡಕಟ್ಟು) ಸಮುದಾಯದ ಸರ್ವಾಂಗೀಣ ಅಭಿವೃದ್ಧಿ, ಸಬಲೀಕರಣ ಹಾಗೂ ಗೌರವ ತಂದುಕೊಡುವಲ್ಲಿ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಹೇಳಿದರು. (ಈ ಸುದ್ದಿಯನ್ನು ಇನ್ನು 76 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ನಾಯ್ಕ್, 1999 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತ್ಯೇಕ ಜನಜಾತಿ ವ್ಯವಹಾರಗಳ ಸಚಿವಾಲಯ ಸ್ಥಾಪಿಸುವ ಮೂಲಕ ಗಿರಿಜನರ ಅಭಿವೃದ್ಧಿಗೆ ಬುನಾದಿ ಹಾಕಿದ್ದರು. ಪ್ರಸ್ತುತ ದ್ರೌಪದಿ ಮುರ್ಮು ಅವರನ್ನು ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವ ಮೂಲಕ ಬಿಜೆಪಿ ಸರ್ಕಾರ ಸಮುದಾಯಕ್ಕೆ ಗೌರವ ತಂದಿದೆ ಎಂದರು.

ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ಹೋರಾಟಗಾರ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು 2021 ರಲ್ಲಿ ಜನಜಾತಿಯ ಗೌರವ ದಿವಸ ಎಂದು ಘೋಷಿಸಿದ್ದಾರೆ. 2025 ರಲ್ಲಿ ಬಿರ್ಸಾ ಮುಂಡಾ ಅವರ 150ನೇ ಜನ್ಮವರ್ಷಾಚರಣೆಯನ್ನು ದೇಶಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು ಎಂದು ತಿಳಿಸಿದರು.
ಕೇಂದ್ರ ಸರ್ಕಾರವು 41 ಸಚಿವಾಲಯಗಳ ಮೂಲಕ 2024–25ನೇ ಸಾಲಿನಲ್ಲಿ ಜನಜಾತಿ ಸಮುದಾಯಕ್ಕಾಗಿ ₹1.23 ಲಕ್ಷ ಕೋಟಿಗೂ ಅಧಿಕ ಅನುದಾನ ನೀಡಿದೆ. ₹79,150 ಕೋಟಿ ವೆಚ್ಚದ ಧರ್ತಿ ಆಬಾ ಜನಜಾತಿ ಗ್ರಾಮೀಣ ಅಭಿಯಾನದ ಮೂಲಕ 5 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನ ತಲುಪಿಸಲಾಗುತ್ತಿದೆ. ₹24,104 ಕೋಟಿ ವೆಚ್ಚದ ಪಿಎಂ-ಜನಮನ್ ಹಾಗೂ ಪ್ರಧಾನಮಂತ್ರಿ ವನಬಂಧು ಕಲ್ಯಾಣ ಯೋಜನೆಗಳು ಜಾರಿಯಲ್ಲಿವೆ ಎಂದು ಅಶೋಕ್ ನಾಯ್ಕ್ ತಿಳಿಸಿದರು.
ಗಿರಿಜನ ಮಕ್ಕಳ ಉಚಿತ ಶಿಕ್ಷಣಕ್ಕಾಗಿ ಮಂಜೂರಾಗಿರುವ 728 ಏಕಲವ್ಯ ಮಾದರಿ ವಸತಿ ಶಾಲೆಗಳ ಪೈಕಿ 508 ಶಾಲೆಗಳು ಕಾರ್ಯಾರಂಭ ಮಾಡಿವೆ. ಅರಣ್ಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಮೌಲ್ಯವರ್ಧನೆ ಒದಗಿಸಲು ವನಧನ್ ವಿಕಾಸ ಮಿಷನ್ ಜಾರಿಗೊಳಿಸಲಾಗಿದೆ ಎಂದು ಅಶೋಕ್ ನಾಯ್ಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಕೆ.ಜಗದೀಶ್, ಹರೀಶ್, ದೊಡ್ಡಪ್ಪ, ಸುನಿಲ್, ಮಂಜುನಾಥ್, ಚಂದ್ರಶೇಖರ್ ಉಪಸ್ಥಿತರಿದ್ದರು.