ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 JUNE 2024
ELECTION NEWS : ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ (Voting) ಇನ್ನೊಂದೆ ದಿನ ಬಾಕಿ. ಬಹಿರಂಗ ಪ್ರಚಾರ ಮುಗಿದಿದ್ದು ಈಗ ಮನೆ ಮನೆ ಭೇಟಿ ಆರಂಭವಾಗಿದೆ. ಅಭ್ಯರ್ಥಿಗಳು, ಅವರ ಬೆಂಬಲಿಗರು ಮತದಾರರನ್ನು ನೇರವಾಗಿ ಸಂಪರ್ಕಿಸಿ ತಮ್ಮ ಪರ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದೆ. ಎರಡೂ ಪಕ್ಷದಿಂದಲು ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಎರಡೂ ಪಕ್ಷಕ್ಕೂ ಬಂಡಾಯದ ಬಿಸಿ
ಆಯನೂರು ಮಂಜುನಾಥ್, ಕಾಂಗ್ರೆಸ್ : ಸಂಸತ್ತು ಮತ್ತು ವಿಧಾನ ಮಂಡಲದ ನಾಲ್ಕು ಸದನಗಳನ್ನು ಕಂಡವರು. ಅನುಭವಿ ರಾಜಕಾರಣಿ. ಕಳೆದ ಬಾರಿ ನೈಋತ್ಯ ಪದವೀಧರರ ಕ್ಷೇತ್ರದಿಂದ ಗೆದ್ದಿದ್ದರು. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ರಾಜೀನಾಮೆ ನೀಡಿದ್ದರು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ಬಾರಿ ಕಾಂಗ್ರೆಸ್ನ ಹುರಿಯಾಳು.
ಡಾ. ಧನಂಜಯ ಸರ್ಜಿ, ಬಿಜೆಪಿ : ಶಿವಮೊಗ್ಗದ ಖ್ಯಾತ ಮಕ್ಕಳ ತಜ್ಞ. ಸಂಘ ಪರಿವಾರದ ಹಿನ್ನೆಲೆ ಹೊಂದಿರುವವರು. ವಿಕಾಸ ಟ್ರಸ್ಟ್ನ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಕಳೆದೆರಡು ವರ್ಷದಿಂದ ಬಿಜೆಪಿಯಲ್ಲಿ ಸಕ್ರಿಯವಾಗಿದ್ದಾರೆ. ವೈದ್ಯ, ಸೌಮ್ಯ ಮಾತುಗಾರ ಎಂಬುದು ಇವರ ಪ್ಲಾಸ್ ಪಾಯಿಂಟ್.
ಎಸ್.ಪಿ.ದಿನೇಶ್, ಪಕ್ಷೇತರ : ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಸ್ಪರ್ಧಿಸಿದ್ದರು. ಈ ಬಾರಿಯು ಟಿಕೆಟ್ ನಿರೀಕ್ಷೆಯಲ್ಲಿ ಕಳೆದೊಂದು ವರ್ಷದಿಂದಲೆ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಕಡೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯ ಸ್ಪರ್ಧೆ ಮಾಡಿದ್ದಾರೆ. ಪದವೀಧರರ ಸಹಕಾರ ಸಂಘದಲ್ಲಿ ಬಹು ವರ್ಷದಿಂದ ಸಕ್ರಿಯ. ವಿವಿಧ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ರಘುಪತಿ ಭಟ್, ಪಕ್ಷೇತರ : ಮಾಜಿ ಶಾಸಕ. ರಾಜಕೀಯದಲ್ಲಿ ಅನುಭವ ಹೊಂದಿರುವವರು. ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಕೆ.ಎಸ್.ಈಶ್ವರಪ್ಪ ಮತ್ತು ರಾಷ್ಟ್ರಭಕ್ತರ ಬಳಗದಿಂದ ಬೆಂಬಲ ಲಭಿಸಿದೆ.
ಪಕ್ಷಗಳಿಗೆ ಬಂಡಾಯದ್ದೇ ತಲೆನೋವು
ಕಾಂಗ್ರೆಸ್ ಪಕ್ಷಕ್ಕೆ ಎಸ್.ಪಿ.ದಿನೇಶ್ ಅವರ ಬಂಡಾಯದ ಸುಳಿವಿತ್ತು. ಹಾಗಾಗಿ ಕಾರ್ಯಕರ್ತರು ಆರಂಭದಿಂದಲು ಮಾನಸಿಕವಾಗಿ ಸಿದ್ಧವಾಗಿದ್ದರು. ಬಿಜೆಪಿಗೆ ಕೊನೆ ಕ್ಷಣದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಆಯನೂರು ಮಂಜುನಾಥ್ ಮತ್ತು ಬಿಜೆಪಿಯ ಡಾ. ಧನಂಜಯ ಸರ್ಜಿ ಹೆಚ್ಚಿವರಿ ಶ್ರಮ ಹಾಕಿ ಪ್ರಚಾರ ನಡೆಸುವುದು ಅನಿರ್ವಾಯವಾಗಿತ್ತು. ಬಂಡಾಯ ಅಭ್ಯರ್ಥಿಗಳಾದ ಎಸ್.ಪಿ.ದಿನೇಶ್ ಮತ್ತು ರಘುಪತಿ ಭಟ್ ಕೂಡ ಪಕ್ಷಗಳ ಅಭ್ಯರ್ಥಿಗಳಿಗೆ ಸರಿಸಮವಾಗಿಯೇ ಕ್ಯಾಂಪೇನ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಎಷ್ಟಿವೆ ಮತಗಟ್ಟೆ?
ನೈಋತ್ಯ ಪದವೀಧರರ ಕ್ಷೇತ್ರವು ಶಿವಮೊಗ್ಗ, ದಾವಣಗೆರೆಯ ಚನ್ನಗಿರಿ, ಹೊನ್ನಾಳಿ ತಾಲೂಕುಗಳು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳನ್ನು ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 38 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸೊರಬದಲ್ಲಿ 2, ಶಿಕಾರಿಪುರದಲ್ಲಿ 3, ಸಾಗರದಲ್ಲಿ 4, ಹೊಸನಗರ 3, ಶಿವಮೊಗ್ಗ ಗ್ರಾಮಾಂತರ 4, ಶಿವಮೊಗ್ಗ ನಗರ 14, ತೀರ್ಥಹಳ್ಳಿ 2, ಭದ್ರಾವತಿಯಲ್ಲಿ 6 ಮತಗಟ್ಟೆ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 27,412 ಮತದಾರರಿದ್ದಾರೆ.
ಗುಂಡು, ತುಂಡಿನ ಗುಸುಗುಸು
ಮತದಾರರಿಗೆ ಈ ಬಾರಿ ಗುಂಡು, ತುಂಡು ಪಾರ್ಟಿ ಕೊಡಲಾಗುತ್ತಿದೆ ಎಂದು ಆರಂಭದಿಂದ ಆರೋಪ ಕೇಳಿ ಬರುತ್ತಿತ್ತು. ಅಭ್ಯರ್ಥಿಗಳು, ಅವರ ಬೆಂಬಲಿಗರು ಪರಸ್ಪರರ ವಿರುದ್ಧ ಇದೇ ಆರೋಪ ಮಾಡುತ್ತಿದ್ದಾರೆ. ಈ ಮಧ್ಯೆ ಪಾರ್ಟಿಯೊಂದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಇದನ್ನೂ ಓದಿ – ಪ್ರಚಾರ ಬಿರುಸುಗೊಳಿಸಿದ ಬಿಜೆಪಿ, ಡಾ. ಧನಂಜಯ ಸರ್ಜಿ ಪರ ಅಖಾಡಕ್ಕಿಳಿದ ಪತ್ನಿ, ಎಲ್ಲೆಲ್ಲಿ ಹೇಗಿದೆ ಕ್ಯಾಂಪೇನ್?
ನೈಋತ್ಯ ಪದವೀಧರರ ಕ್ಷೇತ್ರದ ಈ ಬಾರಿಯ ಚುನಾವಣೆ ಹಲವು ಹೊಸತನ, ಕುತೂಹಲ ಮತ್ತು ನೇರಾನೇರ ಟೀಕೆಗಳಿಗೆ ಸಾಕ್ಷಿಯಾಗಿದೆ. ಹಾಗಾಗಿ ಫಲಿತಾಂಶದತ್ತಲು ತೀವ್ರ ಕುತೂಹಲ ಮೂಡಿದೆ. ಅಲ್ಲದೆ, ಈ ಬಾರಿಯ ಸೋಲು, ಗೆಲುವು ಘಟಾನುಘಟಿಗಳ ರಾಜಕೀಯ ಭವಿಷ್ಯ ಬದಲಿಸುವ ಸಾಧ್ಯತೆ ಇದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422