SHIVAMOGGA LIVE NEWS | 5 SEPTEMBER 2023
SHIMOGA : ಸೈಬರ್ ಕೆಫೆ, ಮೊಬೈಲ್ ಅಂಗಡಿಗಳ ಮೇಲೆ ರೈಲ್ವೆ ಪೊಲೀಸರು ದಾಳಿ (Railway Police Raid) ನಡೆಸಿ ಮೂವರನ್ನು ಬಂಧಿಸಿದ್ದಾರೆ. ಲಕ್ಷಾಂತರ ಮೌಲ್ಯದ ಇ-ಟಿಕೆಟ್ (E Ticket), ಕಂಪ್ಯೂಟರ್ ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ರೇಣುಕಾ ಸೈಬರ್ ಸೆಂಟರ್ನ ಗಣೇಶ್ ರಾಮ್ ನಾಯ್ಕ್ (31), ಶ್ರೀ ಕಮ್ಯುನಿಕೇಷನ್ ಮೊಬೈಲ್ ಸೇಲ್ಸ್ನ ರೇವಣ್ಣಪ್ಪ (36) ಮತ್ತು ಆರ್ಯ ಸೈಬರ್ನ ಪ್ರಶಾಂತ್ ಹೆಗಡೆ (46) ಬಂಧಿತರು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲ್ವೆ ಪೊಲೀಸರು ದಾಳಿ ನಡೆಸಿದ್ದೇಕೆ?
ಹಬ್ಬಗಳ ವೇಳೆ, ವಿಪರೀತ ಬೇಡಿಕೆ ಇರುವ ಸಂದರ್ಭ ಪ್ರಯಾಣಿಕರಿಗೆ ಹೆಚ್ಚಿನ ಬೆಲೆಗೆ ಇ-ಟಿಕೆಟ್ಗಳನ್ನು ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ರೈಲ್ವೆ ಪೊಲೀಸರು ವಿವಿಧೆಡೆ ದಾಳಿ ನಡೆಸಿ ಮೂವರನ್ನು ಬಂಧಿಸಿದೆ.
ಹೇಗೆ ನಡೆಯುತ್ತಿತ್ತು ದಂಧೆ?
ಆನ್ಲೈನ್ ಮೂಲಕ ರೈಲು ಟಿಕೆಟ್ ಬುಕಿಂಗ್ಗೆ ಮೊಬೈಲ್ ನಂಬರ್ನಿಂದ ಲಾಗಿನ್ ಆಗಬೇಕು. ಆರೋಪಿಗಳು ಅನೇಕ ಮೊಬೈಲ್ ನಂಬರ್ಗಳನ್ನು ಲಿಂಕ್ ಮಾಡಿಕೊಂಡು ಐಡಿಗಳನ್ನು ರಚಿಸಿಕೊಂಡಿದ್ದರು. ಹಬ್ಬಗಳ ವೇಳೆ ಮತ್ತು ಟಿಕೆಟ್ಗೆ ಬಹು ಬೇಡಿಕೆ ಇರುವ ಸಂದರ್ಭ ಅನಧಿಕೃತವಾಗಿ ಇ- ಟಿಕೆಟ್ಗಳನ್ನು ಉತ್ಪಾದಿಸುತ್ತಿದ್ದರು. ಅವುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ವಿಮಾನ ನಿಲ್ದಾಣಕ್ಕೆ ಅರ್ಧ ಗಂಟೆಗೊಂದು KSRTC ಬಸ್, ರೈಲ್ವೆ ನಿಲ್ದಾಣಕ್ಕೆ ಯಾಕಿಲ್ಲ ಇಂತಹ ಸರ್ವಿಸ್?
ದಾಳಿ ವೇಳೆ 2.5 ಲಕ್ಷ ರೂ. ಮೌಲ್ಯದ ಇ-ಟಿಕೆಟ್ಗಳು, 1.25 ಲಕ್ಷ ರೂ. ಮೌಲ್ಯದ ಕಂಪ್ಯೂಟರ್ಗಳು, ಪ್ರಿಂಟರ್ಗಳು ಮತ್ತು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಮೈಸೂರಿನ ಆರ್ಪಿಎಫ್ ವಿಭಾಗೀಯ ಸಂರಕ್ಷಣಾ ಕಮಿಷನರ್ ಜೆ. ಕೆ. ಶರ್ಮಾ ಮಾರ್ಗದರ್ಶನದಲ್ಲಿ, ಕ್ರೈಂ ಇನ್ಸ್ಪೆಕ್ಟರ್ ಎಂ. ನಿಷಾದ್, ಸಬ್ ಇನ್ಸ್ಪೆಕ್ಟರ್ ಬಿ. ಚಂದ್ರಶೇಖರ್ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ವೆಂಕಟೇಶ್ ಮತ್ತು ಈಶ್ವರ್ ರಾವ್ ನೇತೃತ್ವದ ವಿಶೇಷ ತಂಡ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ದಾಳಿ ನಡೆಸಿತು. ಆರ್ಪಿಎಫ್ ಹೆಡ್ ಕಾನ್ಸ್ಟೆಬಲ್ ಡಿ.ಚೇತನ್, ಕಾನ್ಸ್ಟೇಬಲ್ಗಳಾದ ಎ.ಪ್ರವೀಣ್, ಇಳಂಗೋವನ್, ಶ್ರೀಲಕ್ಷ್ಮಿ ಪಿ. ಸೋಮನ್ ಮತ್ತು ಎಂ.ಎಸ್. ತನುಜಾ ಇದ್ದರು.
ಇದನ್ನೂ ಓದಿ – ವಿದ್ಯಾನಗರ ರೈಲ್ವೆ ಮೇಲ್ಸೇತುವೆ, ಹೇಗಾಗಿದೆ ಕೆಲಸ? ಮೇಲ್ಭಾಗದಲ್ಲಿ ಹೇಗೆ ಕಾಣುತ್ತೆ? ಇಲ್ಲಿದೆ ಸೇತುವೆಯ 8 ವಿಶೇಷತೆ