SHIVAMOGGA LIVE NEWS | 20 NOVEMBER 2023
SHIMOGA : ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಮತ್ತೊಬ್ಬ ಯುವಕನಿಗೆ 3.09 ಲಕ್ಷ ರೂ. ವಂಚಿಸಲಾಗಿದೆ. ಹಣ ಪಡೆದು ಟಾಸ್ಕ್ ನೀಡಿ ಬಳಿಕ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸ್ಕ್ರೀನ್ ಶಾಟ್ ಕಳುಹಿಸಿದ್ದಕ್ಕೆ 250 ರೂ.
ಶಿವಮೊಗ್ಗ ನಗರದ ಯುವಕನ (ಹೆಸರು ಗೌಪ್ಯ) ಮೊಬೈಲ್ಗೆ ಅನಾಮಧೇಯ ಮೊಬೈಲ್ ನಂಬರ್ನಿಂದ ಯು ಟ್ಯೂಬ್ ಲಿಂಕ್ ಕಳುಹಿಸಲಾಗಿತ್ತು. ಆ ಚಾನಲ್ ಸಬ್ಸ್ಕ್ರೈಬ್ ಮಾಡಿ ಸ್ಕ್ರೀನ್ ಶಾಟ್ ಕಳುಹಿಸುವಂತೆ ತಿಳಿಸಲಾಗಿತ್ತು. ಅದರಂತೆ ಸ್ಕ್ರಿನ್ ಶಾಟ್ ಕಳುಹಿಸಿದಾಗ 250 ರೂ. ಹಣ ಯುವಕನ ಖಾತೆಗೆ ಜಮೆಯಾಗಿತ್ತು.
ಟೆಲಿಗ್ರಾಂ ಲಿಂಕ್, ಟಾಸ್ಕ್ ಮೇಲೆ ಟಾಸ್ಕ್
ನಂತರ ಟೆಲಿಗ್ರಾಂ ಗ್ರೂಪ್ ಸೇರುವಂತೆ ತಿಳಿಸಿ ಟಾಸ್ಕ್ ನೀಡಲಾಯಿತು. ಪ್ರತಿ ಟಾಸ್ಕ್ಗೆ ಇಂತಿಷ್ಟು ಎಂದು ಚಾರ್ಜ್ ವಿಧಿಸಲಾಯಿತು. ಟಾಸ್ಕ್ ಪೂರೈಸುತ್ತಿದ್ದಂತೆ ಹೆಚ್ಚುವರಿ ಹಣ ಯುವಕನ ಖಾತೆಗೆ ವರ್ಗಾಯಿಸಲಾಯಿತು. ಸ್ವಲ್ಪ ಸಮಯದ ಬಳಿಕ ಪ್ರತಿ ಟಾಸ್ಕ್ಗೆ ದೊಡ್ಡ ಮೊತ್ತ ಪಾವತಿಸುವಂತೆ ಸೂಚಿಸಲಾಯಿತು. ಟಾಸ್ಕ್ ಪೂರ್ಣಗೊಂಡರೂ ಲಾಭ ಮತ್ತು ಅಸಲು ಹಣ ಹಿಂತಿರುಗಿಸಲಿಲ್ಲ. ಯುವಕ ಹಣ ಹಿಂತಿರುಗಿಸುವಂತೆ ಕೇಳಿದಾಗ ಟಾಸ್ಕ್ ಸರಿಯಾಗಿ ಮುಗಿಸಿಲ್ಲ. ಇದನ್ನು ಸರಿಪಡಿಸಲು 1.50 ಲಕ್ಷ ರೂ. ಪಾವತಿಸಿದರೆ ಎಲ್ಲ ಹಣ ಒಟ್ಟಿಗೆ ಮರಳಲಿದೆ ಎಂದು ತಿಳಿಸಲಾಯಿತು. ಅದರಂತೆ ಯುವಕ ಕ್ರೆಡ್ ಆಪ್ ಮೂಲಕ ಹಣ ಕಳುಹಿಸಿದ್ದ.
ಇದನ್ನೂ ಓದಿ – ಕಾಂಪ್ಲೆಕ್ಸ್ನ ಮಹಡಿ ಮೇಲಿರುವ ಸೈಬರ್ ಸೆಂಟರ್ ಬಾಗಿಲು ತೆಗೆಯಲು ಬಂದ ಮಾಲೀಕನಿಗೆ ಕಾದಿತ್ತು ಶಾಕ್
ಹಣ ಮರಳದೆ ಇದ್ದಾಗ ವಂಚನೆಗೊಳಗಾಗಿರುವುದು ಅರಿವಾಗಿ ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
