ರೈಲ್ವೆ ಸುದ್ದಿ: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (VJNL) ವತಿಯಿಂದ ಹೊನ್ನಾವಳ್ಳಿ ರೋಡ್ – ಅರಸೀಕೆರೆ ನಿಲ್ದಾಣಗಳ ನಡುವೆ ಕಾಲುವೆ ದಾಟುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜೂನ್ ತಿಂಗಳ ವಿವಿಧ ದಿನಾಂಕಗಳಲ್ಲಿ ಹಲವು ರೈಲು ಸೇವೆಗಳನ್ನು ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ ಹಾಗೂ ಭಾಗಶಃ ರದ್ದುಗೊಳಿಸಿ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.
ರೈಲುಗಳ ರದ್ದು ವಿವರ
ತುಮಕೂರು–ಶಿವಮೊಗ್ಗ ಟೌನ್ ಪ್ಯಾಸೆಂಜರ್ (66577/78) ಜೂನ್ 2 ಮತ್ತು 16 ರಂದು, ತುಮಕೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16567) ಜೂನ್ 6, 13 ಹಾಗೂ ಶಿವಮೊಗ್ಗ ಟೌನ್–ತುಮಕೂರು ಎಕ್ಸ್‌ಪ್ರೆಸ್ (16568) ಜೂನ್ 7, 14 ರಂದು ರದ್ದಾಗಲಿವೆ.

ಬೆಂಗಳೂರು–ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ (12089) ಜೂನ್ 6, 13 ರಂದು ಹಾಗೂ ಶಿವಮೊಗ್ಗ ಟೌನ್–ಬೆಂಗಳೂರು ಜನಶತಾಬ್ದಿ (12090) ಜೂನ್ 7, 14 ರಂದು ರದ್ದಾಗಲಿದೆ. ಇದರೊಂದಿಗೆ ಅರಸೀಕೆರೆ–ಬೆಂಗಳೂರು ಪ್ಯಾಸೆಂಜರ್ (56224/23) ಮತ್ತು ಬೆಂಗಳೂರು–ಚನ್ನಪಟ್ಟಣ ಪ್ಯಾಸೆಂಜರ್ (06581/82) ಜೂನ್ 7 ಮತ್ತು 14 ರಂದು ರದ್ದಾಗಲಿವೆ.
ಮಾರ್ಗ ಬದಲಾವಣೆ
ತಿರುನೆಲ್ವೇಲಿ–ದಾದರ್ ಎಕ್ಸ್‌ಪ್ರೆಸ್ (11022), ಬೆಂಗಳೂರು–ಹೊಸಪೇಟೆ ಪ್ಯಾಸೆಂಜರ್ (56519) ಹಾಗೂ ಬೆಂಗಳೂರು–ಹುಬ್ಬಳ್ಳಿ ಜನಶತಾಬ್ದಿ (12079) ಜೂನ್ 2 (ಕೆಲವು ಜೂನ್ 1) ಮತ್ತು 15, 16 ರಂದು ಚಿಕ್ಕಬಾಣವರ, ನೆಲಮಂಗಲ, ಹಾಸನ ಮೂಲಕ ಸಂಚರಿಸಲಿವೆ. ಈ ರೈಲುಗಳಿಗೆ ತುಮಕೂರು, ತಿಪಟೂರು ಸೇರಿದಂತೆ ಮಧ್ಯದ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಪಂಢರಾಪುರ–ಮೈಸೂರು ಎಕ್ಸ್‌ಪ್ರೆಸ್ (16536), ಬೆಳಗಾವಿ–ಬೆಂಗಳೂರು ಎಕ್ಸ್‌ಪ್ರೆಸ್ (20654), ಸಿಂಧನೂರು–ಯಶವಂತಪುರ ಎಕ್ಸ್‌ಪ್ರೆಸ್ (16546) ಮತ್ತು ವಾಸ್ಕೋ ಡ ಗಾಮಾ–ಯಶವಂತಪುರ ಎಕ್ಸ್‌ಪ್ರೆಸ್ (17310) ಜೂನ್ 6 ಮತ್ತು 13 ರಂದು ಅರಸೀಕೆರೆ, ಹಾಸನ, ನೆಲಮಂಗಲ ಮಾರ್ಗವಾಗಿ ಸಂಚರಿಸಲಿದ್ದು, ತುಮಕೂರು, ತಿಪಟೂರು ನಿಲ್ದಾಣಗಳನ್ನು ಕೈಬಿಡಲಿವೆ.

ಭಾಗಶಃ ರದ್ದು ಹಾಗೂ ನಿಯಂತ್ರಣ
ತಾಳಗುಪ್ಪ–ಬೆಂಗಳೂರು ಎಕ್ಸ್‌ಪ್ರೆಸ್ (20652) ಅರಸೀಕೆರೆ–ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲೇ ಕೊನೆಗೊಳ್ಳಲಿದೆ. ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್ (12725) ಬೆಂಗಳೂರು–ಅರಸೀಕೆರೆ ನಡುವೆ ರದ್ದಾಗಲಿದ್ದು, ಅರಸೀಕೆರೆಯಿಂದ ಪ್ರಯಾಣ ಆರಂಭಿಸಲಿದೆ.
ಜೂನ್ 2, 16, 7 ಮತ್ತು 14 ರಂದು ಯಶವಂತಪುರ–ಶಿವಮೊಗ್ಗ (20689), ಶಿವಮೊಗ್ಗ–ತುಮಕೂರು (16568), ಶಿವಮೊಗ್ಗ–ಬೆಂಗಳೂರು ಜನಶತಾಬ್ದಿ (12090), ಧಾರವಾಡ–ಬೆಂಗಳೂರು (12726) ಮತ್ತು ಬೆಳಗಾವಿ–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (26751) ರೈಲುಗಳನ್ನು ಮಾರ್ಗಮಧ್ಯೆ 15 ರಿಂದ 75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಜೂನ್ 7 ಮತ್ತು 14 ರಂದು ಚಿಕ್ಕಮಗಳೂರು–ಯಶವಂತಪುರ ಎಕ್ಸ್‌ಪ್ರೆಸ್ (16239) 120 ನಿಮಿಷ ತಡವಾಗಿ ಹೊರಡಲಿದೆ ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.
