ಟೆಕ್ ನ್ಯೂಸ್: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕೋಡಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸಲಿದೆ, ಸಾಫ್ಟ್‌ವೇರ್ ಅಭಿವೃದ್ಧಿ ವೆಚ್ಚ ತಗ್ಗಿಸಲಿದೆ ಮತ್ತು ಕಂಪನಿಗಳ ನಿರ್ವಹಣಾ ಹೊರೆ ಕಡಿಮೆ ಮಾಡಲಿದೆ ಎಂಬ ಭರವಸೆ ಮತ್ತು ನಿರೀಕ್ಷೆ ಇತ್ತು. ಆದರೆ, ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಕಂಪನಿಗಳು ಎಐ ತಂತ್ರಜ್ಞಾನವನ್ನು ಎಷ್ಟು ಹೆಚ್ಚಾಗಿ ಬಳಸುತ್ತಿವೆಯೋ, ಅಷ್ಟೇ ದೊಡ್ಡ ಮಟ್ಟದಲ್ಲಿ ಅವುಗಳ ವೆಚ್ಚಗಳು (Bills) ಹೆಚ್ಚಳವಾಗುತ್ತಿವೆ. ಪ್ರಸ್ತುತ ಮಾನವ ಸಂಪನ್ಮೂಲಕ್ಕಿಂತಲೂ ದುಬಾರಿಯಾಗಿ ಪರಿಣಮಿಸುತ್ತಿದೆ. ಇದು ಜಾಗತಿಕ ಟೆಕ್ ವಲಯದಲ್ಲಿ ಆತಂಕ ಮೂಡಿಸಿದೆ.
ಮೈಕ್ರೋಸಾಫ್ಟ್ ಮತ್ತು ಉಬರ್‌ನಂತಹ ಮಲ್ಟಿ ನ್ಯಾಷನಲ್ ಕಂಪನಿಗಳೇ ಪ್ರಸ್ತುತ ಎಐ ಬಿಲ್‌ಗಳ ಹೆಚ್ಚಳದಿಂದಾಗಿ ಕಂಗೆಟ್ಟಿವೆ.

ಆರ್ಥಿಕ ಹೊರೆಯ ತಲೆನೋವು
ಮೈಕ್ರೋಸಾಫ್ಟ್ ಕಂಪನಿಯು ಸಾವಿರಾರು ಡೆವಲಪರ್‌ಗಳು, ಡಿಸೈನರ್‌ಗಳು ಮತ್ತು ಪ್ರಾಡಕ್ಟ್ ಮ್ಯಾನೇಜರ್‌ಗಳಿಗಾಗಿ ಬಿಡುಗಡೆ ಮಾಡಿದ್ದ ಆಂಥ್ರೋಪಿಕ್ ಸಂಸ್ಥೆಯ ‘ಕ್ಲಾಡ್ ಕೋಡ್’ (Claude Code) ಲೈಸೆನ್ಸ್‌ಗಳನ್ನು ಮೈಕ್ರೋಸಾಫ್ಟ್ ಈಗ ರದ್ದುಗೊಳಿಸುತ್ತಿದೆ. ಜುಲೈನಲ್ಲಿ ಆರಂಭವಾಗಲಿರುವ ಹೊಸ ಹಣಕಾಸು ವರ್ಷಕ್ಕೂ ಮುನ್ನವೇ ಕ್ಲೌಡ್ ವೆಚ್ಚವನ್ನು ಕಡಿತಗೊಳಿಸಲು ಮುಂದಾಗಿರುವ ಕಂಪನಿಯು, ತನ್ನದೇ ಆದ ‘ಗಿಟ್‌ಹಬ್ ಕೋಪೈಲಟ್’ (GitHub Copilot) ಬಳಸುವಂತೆ ನೌಕರರಿಗೆ ಸೂಚಿಸುತ್ತಿದೆ.
ಸಾರಿಗೆ ಸಂಸ್ಥೆ ಉಬರ್, ತನ್ನ 2026ರ ಇಡೀ ವರ್ಷದ ಎಐ ಬಜೆಟ್ ಅನ್ನು ಕೇವಲ ಏಪ್ರಿಲ್ ತಿಂಗಳ ವೇಳಗೇ ಸಂಪೂರ್ಣವಾಗಿ ಖಾಲಿ ಮಾಡಿಕೊಂಡಿದೆ. ಕಂಪನಿಯ ಸುಮಾರು 5,000 ಕ್ಕೂ ಹೆಚ್ಚು ಇಂಜಿನಿಯರ್‌ಗಳು ನಿರೀಕ್ಷೆಗಿಂತ ಅತ್ಯಂತ ವೇಗವಾಗಿ ಮತ್ತು ವ್ಯಾಪಕವಾಗಿ ಕ್ಲಾಡ್ ಕೋಡ್ ತಂತ್ರಜ್ಞಾನವನ್ನು ಬಳಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

AI ವೆಚ್ಚ ಹೆಚ್ಚಾಗಿದ್ದೇಕೆ?
ಸಾಫ್ಟ್‌ವೇರ್‌ನಲ್ಲಿನ ದೋಷಗಳನ್ನು ತಿದ್ದಲು ಮತ್ತು ಉತ್ಪಾದಕತೆ ಹೆಚ್ಚಿಸಲು ಎಐ ಸಹಕಾರಿಯಾಗಿದೆ. ಆದರೆ ಅದರ ನಿರ್ವಹಣಾ ವೆಚ್ಚವೇ ಕಂಪನಿಗಳಿಗೆ ದೊಡ್ಡ ಹೊರೆಯಾಗುತ್ತಿದೆ. ‘ಎಐ ಟೋಕನ್‌ಗಳು’ (AI Tokens) ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ನೌಕರರು ಎಐಗೆ ನೀಡುವ ಪ್ರತಿಯೊಂದು ಪ್ರಾಂಪ್ಟ್, ಸೃಷ್ಟಿಯಾಗುವ ಕೋಡಿಂಗ್‌ನ ಪ್ರತಿಯೊಂದು ಸಾಲು ಮತ್ತು ಚಾಟ್‌ಬಾಟ್ ನೀಡುವ ಪ್ರತಿಯೊಂದು ಪ್ರತಿಕ್ರಿಯೆಯೂ ಅಪಾರ ಪ್ರಮಾಣದ ಕಂಪ್ಯೂಟಿಂಗ್ ಶಕ್ತಿಯನ್ನು (Computing power) ಬಳಸಿಕೊಳ್ಳುತ್ತದೆ. ಬಳಕೆ ಹೆಚ್ಚಾದಂತೆಲ್ಲಾ ಈ ಟೋಕನ್‌ಗಳ ಬಿಲ್ ಕೋಟಿಗಟ್ಟಲೆ ದಾಟುತ್ತಿದೆ ಎಂದು ಬಿಸ್ನೆಸ್ ಸ್ಟಾಂಡರ್ಡ್ ವರದಿ ತಿಳಿಸಿದೆ.
ಗೋಲ್ಡ್‌ಮನ್ ಸ್ಯಾಚ್ಸ್ ಸಂಸ್ಥೆಯ ಅಂದಾಜಿನ ಪ್ರಕಾರ, ಮುಂಬರುವ 2030ರ ವೇಳೆಗೆ ಎಐ ಟೋಕನ್‌ಗಳ ಬಳಕೆ 24 ಪಟ್ಟು ಹೆಚ್ಚಾಗಲಿದ್ದು, ಪ್ರತಿ ತಿಂಗಳು 120 ಕ್ವಾಡ್ರಿಲಿಯನ್ ಟೋಕನ್‌ಗಳು ಬಳಕೆಯಾಗಲಿವೆ. ತಜ್ಞರ ಪ್ರಕಾರ, ಭವಿಷ್ಯದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗಿ ಎಐ ಮಾದರಿಗಳ ನಿರ್ವಹಣಾ ವೆಚ್ಚ ಶೇ 90 ರಷ್ಟು ಕಡಿಮೆಯಾಗಬಹುದು. ಆದರೆ ಜಗತ್ತಿನಲ್ಲಿ ಎಐ ಬಳಕೆದಾರರ ಸಂಖ್ಯೆ ಹಿರಿದಾಗುತ್ತಿರುವುದರಿಂದ ಒಟ್ಟಾರೆ ವೆಚ್ಚದ ಸ್ಫೋಟ ತಡೆಯುವುದು ಕಷ್ಟಕರವಾಗಲಿದೆ. ಸದ್ಯ ಎಐ ತಂತ್ರಜ್ಞಾನ ದಕ್ಷತೆಯನ್ನೇನೋ ಸಾಬೀತುಪಡಿಸಿದೆ. ಆದರೆ ಅದರ ಆರ್ಥಿಕ ನಿರ್ವಹಣೆಯ ಬಿಕ್ಕಟ್ಟು ಮಾತ್ರ ಇನ್ನೂ ಬಗೆಹರಿಯದ ಒಗಟಾಗಿಯೇ ಉಳಿದಿದೆ.
