ಟೆಕ್ ನ್ಯೂಸ್: ಸೈಬರ್ ವಂಚಕರು (Cyber Fraud) ದಿನಕ್ಕೊಂದು ಮಾದರಿಯಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಈಗ ಫೇಸ್‌ಬುಕ್ (Facebook) ಬ್ಲೂ ಟಿಕ್ (Blue Tick) ಹೆಸರಿನಲ್ಲಿ ಜನರಿಗೆ ಟೋಪಿ ಹಾಕಲು ಆರಂಭಿಸಿದ್ದಾರೆ.
ಏನಿದು ಬ್ಲೂ ಟಿಕ್?
ಫೇಸ್‌ಬುಕ್‌ನಲ್ಲಿ ಪ್ರಖ್ಯಾತ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಬ್ಲೂ ಟಿಕ್ ಅಥವಾ ವೆರಿಫಿಕೇಶನ್ ಬ್ಯಾಡ್ಜ್ ನೀಡಲಾಗುತ್ತದೆ. ಫೇಸ್‌ಬುಕ್‌ನ ಪ್ರೊಫೈಲ್ ಫೋಟೊದ ಮುಂದೆ ಬ್ಲೂ ಟಿಕ್ ಹೊಂದುವುದು ಪ್ರತಿಷ್ಠೆಯ ಸಂಕೇತವಾಗಿದೆ. ಇದನ್ನೇ ಧಾಳವಾಗಿಸಿಕೊಂಡ ಸೈಬರ್ ವಂಚಕರು, ಜನರಿಗೆ ಗಾಳ ಹಾಕುತ್ತಿದ್ದಾರೆ. ಸುಮಾರು 30,000ಕ್ಕೂ ಹೆಚ್ಚು ಜನರ ಫೇಸ್‌ಬುಕ್ ಖಾತೆಗಳು ಹ್ಯಾಕರ್‌ಗಳ ಪಾಲಾಗಿವೆ ಎಂದು ವರದಿಯಾಗಿದೆ.

ಬ್ಲೂ ಟಿಕ್ ಆಸೆ ತೋರಿಸಿ ಖಾತೆ ಹ್ಯಾಕ್
ಫೇಸ್‌ಬುಕ್ ಬಳಕೆದಾರರಿಗೆ ನಕಲಿ ಇಮೇಲ್ ಅಥವಾ ಮೆಸೇಜ್‌ಗಳನ್ನು ಕಳುಹಿಸಲಾಗುತ್ತಿದೆ. “ನಿಮ್ಮ ಖಾತೆಯು ಬ್ಲೂ ಟಿಕ್ ಪಡೆಯಲು ಅರ್ಹವಾಗಿದೆ. ತಕ್ಷಣ ಈ ಲಿಂಕ್ ಕ್ಲಿಕ್ ಮಾಡಿ” ಎಂದು ಆಮಿಷ ಒಡ್ಡಲಾಗುತ್ತಿದೆ.

ಹೇಗೆ ನಡೀತಿದೆ ವಂಚನೆ?
- ಬಳಕೆದಾರರಿಗೆ ಒಂದು ಲಿಂಕ್ ಕಳುಹಿಸಲಾಗುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಫೇಸ್‌ಬುಕ್ ಲಾಗಿನ್ ಪುಟದಂತೆಯೇ ಕಾಣುವ ನಕಲಿ ಪುಟ ತೆರೆದುಕೊಳ್ಳುತ್ತದೆ.
- ಬಳಕೆದಾರರು ಅಲ್ಲಿ ತಮ್ಮ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ನೀಡಿದ ತಕ್ಷಣ, ಆ ಮಾಹಿತಿ ಹ್ಯಾಕರ್‌ಗಳ ಕೈ ಸೇರುತ್ತದೆ.
- ವಂಚಕರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬಳಕೆದಾರರ ಫೋನ್‌ಗೆ ಬರುವ ಒಟಿಪಿ ಅಥವಾ ಸೆಕ್ಯೂರಿಟಿ ಕೋಡ್‌ಗಳನ್ನು ಸಹ ಕದಿಯುತ್ತಿದ್ದಾರೆ.
“ಯಾವುದೇ ಸಾಮಾಜಿಕ ಜಾಲತಾಣ ಇಮೇಲ್ ಅಥವಾ ಇನ್‌ಬಾಕ್ಸ್ ಮೆಸೇಜ್ ಮೂಲಕ ಬ್ಲೂ ಟಿಕ್ ನೀಡುವುದಿಲ್ಲ. ವೆರಿಫಿಕೇಶನ್ ಪ್ರಕ್ರಿಯೆಯು ಯಾವಾಗಲೂ ಅಪ್ಲಿಕೇಶನ್‌ನ ಅಧಿಕೃತ ಸೆಟ್ಟಿಂಗ್ಸ್ ಮೂಲಕವೇ ನಡೆಯುತ್ತದೆ. ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದು ಅಪಾಯಕಾರಿ” ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ವಾಟ್ಸಪ್‌ನಿಂದ ಮತ್ತೊಂದು ಫೀಚರ್ ಔಟ್, ಯಾವುದದು? ಕಾರಣವೇನು?
ಹ್ಯಾಕ್ ಆದ ಖಾತೆಗಳ ದುರ್ಬಳಕೆ
ಈಗಾಗಲೇ ಸುಮಾರು 30,000ಕ್ಕೂ ಹೆಚ್ಚು ಖಾತೆಗಳನ್ನು ಹ್ಯಾಕರ್‌ಗಳ ಪಾಲಾಗಿವೆ ಎಂದು ಅಂದಾಜಿಸಲಾಗಿದೆ. ಹೀಗೆ ಹ್ಯಾಕರ್‌ಗಳ ಕೈ ಸೇರುವ ಖಾತೆಗಳು ದುರ್ಬಳಕೆ ಆಗುತ್ತಿವೆ. ಆ ಖಾತೆಗಳ ಮೂಲಕ ತಪ್ಪು ಮಾಹಿತಿ ಹರಡುವುದು, ಅಶ್ಲೀಲ ಕಂಟೆಂಟ್ ಪೋಸ್ಟ್ ಮಾಡುವುದು ಅಥವಾ ಆ ಖಾತೆಯ ಸ್ನೇಹಿತರಿಗೆ ಹಣಕ್ಕಾಗಿ ಬೇಡಿಕೆ ಇಡುವಂತಹ ಕೃತ್ಯಗಳು ನಡೆಯುತ್ತಿವೆ ಎಂದು ಮನಿ ಕಂಟ್ರೋಲ್ ವರದಿಯಲ್ಲಿ ತಿಳಿಸಲಾಗಿದೆ.
ಬಳಕೆದಾರರು ಎಚ್ಚರ ವಹಿಸಬೇಕು
ಫೇಸ್‌ಬುಕ್ ಬಳಕೆದಾರರು ಅನಧಿಕೃತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಫೇಸ್‌ಬುಕ್ ಸೆಟ್ಟಿಂಗ್ಸ್ ಹೊರತುಪಡಿಸಿ ಬೇರೆಲ್ಲೂ ನಿಮ್ಮ ಲಾಗಿನ್ ವಿವರ ನೀಡಬೇಡಿ. ಖಾತೆಗೆ ಬಲಿಷ್ಠವಾದ ಪಾಸ್‌ವರ್ಡ್ ಇಡಿ. ಟೂ ಫ್ಯಾಕ್ಟರ್ ಅಥೆಂಟಿಕೇಶನ್ ಆನ್ ಮಾಡಿಕೊಳ್ಳಿ. ಬಂದ ಇಮೇಲ್‌ನ ವಿಳಾಸ ಸರಿಯಾಗಿದೆಯೇ ಎಂದು ಪರಿಶೀಲಿಸಿ ಎಂದು ಸಲಹೆ ನೀಡಲಾಗಿದೆ.
