ನವದೆಹಲಿ: ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗುತ್ತಿದೆ. ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಕಂಪನಿಯೊಂದಿಗೆ ಕೈಜೋಡಿಸಲು ಬಿಎಸ್‌ಎನ್‌ಎಲ್ ಆರಂಭಿಕ ಹಂತದ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಉಪಗ್ರಹ ಆಧಾರಿತ ಇಂಟರ್‌ನೆಟ್ ಬ್ಯಾಕ್‌ಹಾಲ್ ಮತ್ತು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳಿಗೆ ಉನ್ನತ ಮಟ್ಟದ ಎಂಟರ್‌ಪ್ರೈಸ್ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಎರಡು ಕಂಪನಿಗಳ ಉನ್ನತಾಧಿಕಾರಿಗಳು ಇತ್ತೀಚೆಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹಳ್ಳಿ ಹಳ್ಳಿಗೂ ಹೈ ಸ್ಪೀಡ್ ಇಂಟರ್‌ನೆಟ್
ಭಾರತದ ಗ್ರಾಮೀಣ ಹಾಗೂ ಅತ್ಯಂತ ದುರ್ಗಮ ಪ್ರದೇಶಗಳಿಗೆ 4G ಮತ್ತು 5G ತಂತ್ರಜ್ಞಾನದ ಇಂಟರ್‌ನೆಟ್ ತಲುಪಿಸುವುದು ಕೇಂದ್ರ ಸರ್ಕಾರದ ಮುಖ್ಯ ಗುರಿಯಾಗಿದೆ. ಸದ್ಯ ದೇಶದ ಗ್ರಾಮೀಣ ಭಾಗದ ಟೆಲಿ ಡೆನ್ಸಿಟಿ ಶೇ.60.02 ರಷ್ಟಿದೆ. ಇದನ್ನು ಶೇ.100 ಕ್ಕೆ ಹೆಚ್ಚಿಸಲು ಬಿಎಸ್‌ಎನ್‌ಎಲ್ ಸ್ಟಾರ್‌ಲಿಂಕ್ ನೆರವು ಕೋರುತ್ತಿದೆ.
ಈ ಒಪ್ಪಂದ ಯಶಸ್ವಿಯಾದರೆ, ಮೊಬೈಲ್ ಟವರ್‌ಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು ವರ್ಷಗಟ್ಟಲೆ ಕಾಯಬೇಕಾಗುವುದಿಲ್ಲ. ಸ್ಟಾರ್‌ಲಿಂಕ್ ಸ್ಯಾಟಲೈಟ್ ನೆರವಿನಿಂದ ಕೇವಲ ಕೆಲವೇ ವಾರಗಳಲ್ಲಿ ದುರ್ಗಮ ಪ್ರದೇಶಗಳ ಟವರ್‌ಗಳನ್ನು ನೆಟ್‌ವರ್ಕ್‌ಗೆ ಜೋಡಿಸಬಹುದಾಗಿದೆ. ಹಾಗಾಗಿಯೆ ಬಿಎಸ್‌ಎನ್‌ಎಲ್ ಮತ್ತು ಸ್ಟಾರ್‌ಲಿಂಕ್ ನಡುವಿನ ಚರ್ಚೆ ಟೆಲಿಕಾಂ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

“ಈ ಸಹಭಾಗಿತ್ವವು ಈಶಾನ್ಯ ರಾಜ್ಯಗಳು, ಹಿಮಾಲಯದ ತಪ್ಪಲು ಮತ್ತು ನಡುಗಡ್ಡೆಗಳಂತಹ ದುರ್ಗಮ ಪ್ರದೇಶಗಳಿಗೆ ವರದಾನವಾಗಲಿದೆ. ಇಲ್ಲಿ ಭೂಗತ ಫೈಬರ್ ಕೇಬಲ್ ಹಾಕುವುದು ತುಂಬಾ ವೆಚ್ಚದಾಯಕ ಮತ್ತು ಕಷ್ಟದ ಕೆಲಸ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತುರ್ತು ಸಂವಹನ ವ್ಯವಸ್ಥೆ ಕಲ್ಪಿಸಲು ಇದು ಅತ್ಯಂತ ವೇಗವಾದ ಮಾರ್ಗವಾಗಿದೆ.”
– ಅನುಪಮ್ ಶ್ರೀವಾಸ್ತವ, ಬಿಎಸ್‌ಎನ್‌ಎಲ್‌ನ ಮಾಜಿ ಅಧ್ಯಕ್ಷ
ಇನ್ನೊಂದೆ ಹೆಜ್ಜೆ ಬಾಕಿ
ಸ್ಪೇಸ್ ಎಕ್ಸ್ ಸಂಸ್ಥೆಯ ಅಂಗಸಂಸ್ಥೆ ಸ್ಟಾರ್‌ಲಿಂಕ್ ಜಗತ್ತಿನ ಸುಮಾರು 150 ದೇಶಗಳಲ್ಲಿ ಹೈ-ಸ್ಪೀಡ್ ಇಂಟರ್‌ನೆಟ್ ಒದಗಿಸುತ್ತಿದೆ. ಇತ್ತ ಭಾರತದಲ್ಲಿ ಸೇವೆ ಆರಂಭಿಸಲು ಇನ್-ಸ್ಪೇಸ್ ಮತ್ತು ದೂರಸಂಪರ್ಕ ಇಲಾಖೆಯಿಂದ ಅಗತ್ಯ ತರಂಗಾಂತರಗಳ ಬಳಕೆಗೆ ಅನುಮತಿ ಸಿಕ್ಕಿದೆ. ಆದರೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅಂತಿಮ ಕ್ಲಿಯರೆನ್ಸ್ ಪ್ರಕ್ರಿಯೆ ಬಾಕಿ ಇದೆ. ಸರ್ಕಾರಿ ಸಂಸ್ಥೆ ಬಿಎಸ್‌ಎನ್‌ಎಲ್ ಜೊತೆಗೆ ಕೈಜೋಡಿಸುವುದರಿಂದ ಸ್ಟಾರ್‌ಲಿಂಕ್‌ಗೆ ಭಾರತದ ನಿಯಮಾವಳಿಗಳನ್ನು ಪಾಲಿಸುವುದು ಮತ್ತಷ್ಟು ಸುಲಭವಾಗಲಿದೆ ಎಂದು ವರದಿಯಾಗಿದೆ.
ಈ ಒಪ್ಪಂದದ ಕುರಿತು ಬಿಎಸ್‌ಎನ್‌ಎಲ್ ಹಾಗೂ ಸ್ಟಾರ್‌ಲಿಂಕ್ ಅಧಿಕೃತವಾಗಿ ಇನ್ನು ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಆದರೆ ಟೆಲಿಕಾಂ ಉದ್ಯಮ ವಲಯದಲ್ಲಿ ಈ ಮಾತುಕತೆ ತೀವ್ರ ಕುತೂಹಲ ಮೂಡಿಸಿದೆ.
