ಭದ್ರಾವತಿಯ ಮಂಜುಳಾ ನಿವಾಸಕ್ಕೆ ಡಿಸಿ, ಎಸ್‌ಪಿ ಭೇಟಿ, ಅಂತಿಮ ದರ್ಶನ, ಕುಟುಂಬಕ್ಕೆ ಸಾಂತ್ವನ

ಭದ್ರಾವತಿ: ಎಸ್‌ಐಆರ್ ಪ್ರಕ್ರಿಯೆ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದ ಬೂತ್ ಮಟ್ಟದ ಮಹಿಳಾ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ (50) ಅವರ ಮನೆಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಇಂದು ಭೇಟಿ ನೀಡಿದ್ದರು. ಮಂಜುಳಾ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಭದ್ರಾವತಿ ತಾಲ್ಲೂಕಿನ ಕಲ್ಲಾಪುರ ಬಳಿ ಕೋಡಿ ಹೊಸೂರು ಗ್ರಾಮದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾಗ ಮಂಜುಳಾ ಅವರು ಕುಸಿದು ಬಿದ್ದು ಮೃತಪಟ್ಟಿದ್ದರು.

DC-Prabhulinga-Kavalikatti-visits-Manjula-House-at-Bhadravathi

‘ಕರ್ತವ್ಯದಲ್ಲಿದ್ದಾಗಲೇ ಮರಣ ಹೊಂದಿದ ಬಿಎಲ್‌ಓ ಅವರ ಕುಟುಂಬಕ್ಕೆ ಸರ್ಕಾರದ ನಿಯಮಗಳ ಅನುಸಾರ ದೊರೆಯಬೇಕಾದ ಸೌಲಭ್ಯ ಹಾಗೂ ಪರಿಹಾರದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದುʼ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್.ಬಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ, ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.