ಭದ್ರಾವತಿ: ಆನ್‌ಲೈನ್ ಶಾಪಿಂಗ್ ಆಪ್ ಮೀಶೋದ ಕಸ್ಟಮರ್ ಕೇರ್ ಹೆಸರಿನಲ್ಲಿ ಬಂದ ಕರೆಯನ್ನು ನಂಬಿ OTP ಹಂಚಿಕೊಂಡ ವೃದ್ಧರೊಬ್ಬರು ₹1.45 ಲಕ್ಷ ಕಳೆದುಕೊಂಡಿದ್ದಾರೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಸೀಗೇಬಾಗಿಯ ನಿವಾಸಿಯೊಬ್ಬರು ವಂಚನೆಗೊಳಗಾದವರು. ಇವರು ಮೇ 24ರಂದು ಮೀಶೋ ಆಪ್ ಮೂಲಕ ₹138 ಮೌಲ್ಯದ ಜಪಾನಿ ಜೆಲ್ ಆಯಿಲ್ ಬುಕ್ ಮಾಡಿದ್ದರು. ಜೂನ್ 6ರಂದು ಬಂದಿದ್ದ ಉತ್ಪನ್ನ ಸರಿಯಿಲ್ಲದ ಕಾರಣ ಅದನ್ನು ವಾಪಸ್ ಮಾಡಲು ಯತ್ನಿಸಿದಾಗ, ಹಣ ಮರುಪಾವತಿಯಾಗುವುದಿಲ್ಲ ಎಂಬ ಸಂದೇಶ ಬಂದಿತ್ತು.

ಈ ಹಿನ್ನೆಲೆ ಜೂನ್ 7ರಂದು ಗೂಗಲ್‌ನಲ್ಲಿ ಸಿಕ್ಕ ಮೀಶೋ ಗ್ರಾಹಕ ಸೇವಾ ಕೇಂದ್ರದ ಸಂಖ್ಯೆಗೆ ಭಾಷಾ ಕರೆ ಮಾಡಿದ್ದರು. ಅಂದೇ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಮೀಶೋ ಕಂಪನಿಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದ. ಹಣ ಮರುಪಾವತಿ ಮಾಡುವುದಾಗಿ ಹೇಳಿ ಮೊಬೈಲ್‌ಗೆ ಬಂದ ಎರಡು ಒಟಿಪಿ ಸಂಖ್ಯೆಗಳನ್ನು ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಮರುದಿನ ಬೆಳಿಗ್ಗೆ ಭಾಷಾ ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಎಸ್‌ಬಿಐ ಖಾತೆಯಿಂದ ₹99,000 ಹಾಗೂ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ₹46,000 ಸೇರಿದಂತೆ ಒಟ್ಟು ₹1,45,000 ಆನ್‌ಲೈನ್ ಮೂಲಕ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
