ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 6 ಜನವರಿ 2022
ಭದ್ರಾವತಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸಾ ಮಿಲ್ ಒಂದರಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಸತತ ಅಗ್ನಿಶಾಮಕ ಸಿಬ್ಬಂದಿ ಸತತ ಎಂಟು ಗಂಟೆ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು, ಬೆಂಕಿಯ ಪರಿಣಾಮ ಅಕ್ಕಪಕ್ಕದ ಕಟ್ಟಡಗಳು ಹಾನಿಗೊಳಗಾಗಿವೆ.
ಭದ್ರಾವತಿ ಬಸ್ ನಿಲ್ದಾಣ ಸಮೀಪದ ಮಂಜುನಾಥ ಸಾಮಿಲ್’ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 11 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿದೆ. ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಎಂಟು ಗಂಟೆ ಕಾರ್ಯಾಚರಣೆ
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ತೀವ್ರ ಸ್ವರೂಪದಲ್ಲಿ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಿಯಂತ್ರಿಸುವುದಕ್ಕೆ, ಎಂಟು ಗಂಟೆ ಕಾರ್ಯಾಚರಣೆ ನಡೆಸುವಂತಾಯಿತು. ಒಂಭತ್ತು ಅಗ್ನಿಶಾಮಕ ವಾಹನಗಳ ಮೂಲಕ ನಿರಂತರವಾಗಿ ನೀರು ಪೂರೈಸಲಾಯಿತು. ಆದರೂ ಬೆಂಕಿ ವ್ಯಾಪಕವಾಗಿ ಉರಿಯುತ್ತಿತ್ತು.
ಧಗಧಗ ಉರಿದ ನಾಟ
ಮಂಜುನಾಥ ಸಾಮಿಲ್’ನಲ್ಲಿ ಭಾರಿ ಪ್ರಮಾಣದ ನಾಟ ಸಂಗ್ರಹಿಸಲಾಗಿತ್ತು. ಬೆಂಕಿಯ ತೀವ್ರತೆಗೆ ನಾಟ ಭಸ್ಮವಾಗುತ್ತಲೆ ಹೋದವು. ಅಗ್ನಿಶಾಮಕ ಸಿಬ್ಬಂದಿ ಒಂದೆಡೆ ಬೆಂಕಿ ನಂದಿಸುವಷ್ಟರಲ್ಲಿ ಮತ್ತೊಂದು ಕಡೆಗೆ ಬೆಂಕಿ ವ್ಯಾಪಿಸುತ್ತಿತ್ತು. ಹಾಗಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿ ಕಷ್ಟಪಡಬೇಕಾಯಿತು.
ಅಕ್ಕಪಕ್ಕದ ಊರಿನಿಂದ ಸಿಬ್ಬಂದಿ
ಬೆಂಕಿ ವ್ಯಾಪಕವಾಗಿ ಹಬ್ಬುತ್ತಿದ್ದರಿಂದ ಅಕ್ಕಪಕ್ಕದ ಊರುಗಳಿಂದಲು ಅಗ್ನಿಶಾಮಕ ವಾಹನಗಳು, ಸಿಬ್ಬಂದಿಯನ್ನು ಕರೆಯಿಸಲಾಯಿತು. 50ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗ, ತರೀಕೆರೆ, ಚನ್ನಗಿರಿ, ಕಡೂರು, ಭದ್ರಾವತಿಯ ಎಂಪಿಎಂ, ವಿಐಎಸ್ಎಲ್ ಅಗ್ನಿಶಾಮಕ ಘಟಕದಿಂದಲೂ ವಾಹನಗಳು, ಸಿಬ್ಬಂದಿಯನ್ನು ಕರೆಯಿಸಿಕೊಂಡು ಬೆಂಕಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಯಿತು.
ಅಕ್ಕಪಕ್ಕದ ಕಟ್ಟಡಗಳಲ್ಲಿ ಆತಂಕ
ಬೆಂಕಿಯಿಂದಾಗಿ ಅಕ್ಕಪಕ್ಕದ ಕಟ್ಟಡದ ಜನರು ಆತಂಕಕ್ಕೀಡಾದರು. ರಾತ್ರಿ ಇಡೀ ನಿದ್ರೆ ಬಿಟ್ಟು ಮನೆಗಳಿಂದ ಹೊರಗೆ ಉಳಿದರು. ಬೆಂಕಿ ಹೊತ್ತುಕೊಂಡು, ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅಕ್ಕಪಕ್ಕದ ಕಟ್ಟಡದ ಜನರು, ಮನೆಯಲ್ಲಿದ್ದ ಸಿಲಿಂಡರ್’ಗಳನ್ನು ಹೊರಗೆ ತಂದು ಸುರಕ್ಷಿತ ಸ್ಥಳದಲ್ಲಿ ಇರಿಸಿದರು. ಈ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ನೆರವಾದರು. ಆದರೆ ಬೆಂಕಿಯ ತೀವ್ರತೆಯಿಂದಾಗಿ ಅಕ್ಕಪಕ್ಕದ ಒಂದಷ್ಟು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಸಾಮಿಲ್ ಪಕ್ಕದಲ್ಲಿದ್ದ ಎರಡು ಅಂಗಡಿಗಳು ಸುಟ್ಟು ಕರಕಲಾಗಿದೆ. ಈ ಬಗ್ಗೆ ಇನ್ನಷ್ಟೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಕಂಟ್ರೋಲ್’ಗೆ ಬಂದ ಬೆಂಕಿ
ಸತತ ಎಂಟು ಗಂಟೆ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ. ಈಗ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಒಂದು ವೇಳೆ ಮತ್ತೆ ಬೆಂಕಿ ಕಾಣಿಸಿಕೊಂಡರೆ ಕ್ರಮ ಕೈಗೊಳ್ಳಲು ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಬೆಂಕಿ ಹೊತ್ತುಕೊಳ್ಳಲು ಕಾರಣವೇನು?
ಭದ್ರಾವತಿಯಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕಿಟ್’ನಿಂದಾಗಿ ಬೆಂಕಿ ಹೊತ್ತುಕೊಂಡಿರುವ ಬಗ್ಗೆ ಶಂಕೆ ಇದೆ. ಆದರೆ ಕಿಡಿಗೇಡಿ ಕೃತ್ಯವನ್ನು ತಳ್ಳಿಹಾಕುವಂತಿಲ್ಲ. ರಾತ್ರಿ 10 ಗಂಟೆ ಹೊತ್ತಿಗೆ ಸಾಮಿಲ್’ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಸಾಮಿಲ್ ಮಾಲೀಕರಿಗೆ ಮಾಹಿತಿ ತಿಳಿಸಲು ಮುಂದಾಗಿದ್ದಾರೆ. ಕೆಲವೆ ಹೊತ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾರಿ ಎತ್ತರದವರೆಗೂ ಬೆಂಕಿಯ ಕೆನ್ನಾಲಿಗೆ ಇತ್ತು.
ಪ್ರಾಣದ ಹಂಗು ತೊರೆದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕಟ್ಟಡಗಳಿಗೆ ಹಾನಿಯಾಗಿರುವ ಶಂಕೆ ಇರುವುದರಿಂದ, ಅಕ್ಕಪಕ್ಕದ ಕಟ್ಟಡದ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ಸದ್ಯ ಕಟ್ಟಡಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಕಿ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬೆಳಗ್ಗೆಯಿಂದಲೇ ವಿವಿಧ ಬಡಾವಣೆಗಳಿಂದ ಜನರು ಮಂಜುನಾಥ ಸಾಮಿಲ್ ಕಡೆಗೆ ಬರುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422