ಭದ್ರಾವತಿ: ತಾಲ್ಲೂಕಿನ ಹೊನ್ನಟ್ಟಿ ಹೊಸೂರು ಬಳಿ ಭಾನುವಾರ ಬೆಳಗಿನ ಜಾವ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಯುವ ರಂಗ ಕಲಾವಿದ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಭದ್ರಾವತಿಯ ಸಿ.ಎಂ.ಹರ್ಷ (31) ಮೃತ ರಂಗ ಕಲಾವಿದ. ಸಮೀಪದ ಗೋಣಿಬೀಡು ನಿವಾಸಿ. ಹೊನ್ನಟ್ಟಿ-ಹೊಸೂರು ಬಳಿ ಅಪಘಾತ ಸಂಭವಿಸಿದೆ. ಸಂಬಂಧಿಯನ್ನು ಭದ್ರಾವತಿಗೆ ಬಿಟ್ಟು ಬರಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹರ್ಷ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಬಂಧಿಗೆ ಸಣ್ಣ ಗಾಯಗಳಾಗಿವೆ.

ಪ್ರವೃತ್ತಿಯಲ್ಲಿ ಹವ್ಯಾಸಿ ರಂಗ ಕಲಾವಿದರು, ಜಾನಪದ, ರಂಗಗೀತೆ ಗಾಯಕರು, ಯೋಗ ತರಬೇತುದಾರ ಹಾಗೂ ಅಂತಾರಾಷ್ಟ್ರೀಯ ಯೋಗಪಟು ಆಗಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ, ಕುವೆಂಪು ವಿವಿಯ ನೀಡುವ ನಿರಂಕುಶಮತಿ ಪ್ರಶಸ್ತಿ, ಮಂಟೇಸ್ವಾಮಿ ಕಲಾ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಪಾತ್ರರಾಗಿದ್ದರು. ಘಟನೆಗೆ ಸಂಬಂಧಿಸಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.