ಭದ್ರಾವತಿ: ಹಿಂದೂ ಮಹಾಸಭಾ ಹಾಗೂ ಹಿಂದೂ ರಾಷ್ಟ್ರಸೇನೆ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿಯ ವಿಸರ್ಜನೆ ಇಂದು ನಡೆಯಲಿದೆ. ವಿಸರ್ಜನಾಪೂರ್ವ ಮೆರವಣಿಗೆಯ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ ನಡೆಸಲಾಯಿತು.
ಕೇಸರಿ ಬಾವುಟ, ಬಂಟಿಂಗ್ಸ್
ಮೆರವಣಿಗೆ ಪ್ರಯುಕ್ತ ನಗರದ ಪ್ರಮುಖ ವೃತ್ತಗಳನ್ನು ಕೇಸರಿ ಬಾವುಟ, ಬಂಟಿಗ್ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಬಸವಣ್ಣ, ಇಮ್ಮಡಿ ಪುಲಕೇಶಿ, ಶಿವಾಜಿ ಮಹಾರಾಜ, ಕೃಷ್ಣದೇವರಾಯ ಮೊದಲಾದವರ ಕಟ್ಔಟ್ಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಸ್ಥಾಪಿಸಲಾಗಿದೆ.

ಗಣಪತಿ ಮೂರ್ತಿಯ ಮೆರವಣಿಗೆ ಬೆಳಿಗ್ಗೆ 11.30ಕ್ಕೆ ಮಹಾಮಂಗಳಾರತಿಯ ನಂತರ ಆರಂಭವಾಗಲಿದ್ದು, ಎನ್ಎಂಸಿ ಮುಖ್ಯ ರಸ್ತೆ, ರಂಗಪ್ಪ ವೃತ್ತ, ಸಿಎನ್ ರಸ್ತೆ, ಮಾಧವಾಚಾರ್ ವೃತ್ತದ ಮೂಲಕ ಸಾಗಲಿದೆ.
ಪೊಲೀಸರಿಂದ ಪಥಸಂಚಲನ
ನಗರದಲ್ಲಿ 1,000ಕ್ಕೂ ಹೆಚ್ಚು ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೋಮವಾರ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಕಾರಿಯಪ್ಪ, ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಭಾಗವಹಿಸಿದ್ದರು.