ಭದ್ರಾವತಿ: ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಕರ್ತವ್ಯಕ್ಕೆ ತೆರಳುತ್ತಿದ್ದ ಒಬ್ಬರು ಹೋಂ ಗಾರ್ಡ್ ಸಾವನ್ನಪ್ಪಿದ್ದಾರೆ. ಮತ್ತೊಮ್ಮ ಹೋಂ ಗಾರ್ಡ್ ಸಿಬ್ಬಂದಿಗೆ ಗಂಭೀರ ಗಾಯವಾಗಿದ್ದು, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಭದ್ರಾವತಿಯ ಉಂಬ್ಳೆಬೈಲು ರಸ್ತೆಯ ಮೂಲೆಕಟ್ಟೆ ಬಳಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಹೋಂ ಗಾರ್ಡ್ ಸಿಬ್ಬಂದಿ ರಾತ್ರಿ ಕರ್ತವ್ಯಕ್ಕೆ ಬೈಕಿನಲ್ಲಿ ಬೊಮ್ಮನಕಟ್ಟೆಗೆ ತೆರಳುತ್ತಿದ್ದರು. ಈ ಸಂದರ್ಭ ಎದುರಿನಿಂದ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದು, ಸ್ವಲ್ಪ ದೂರದ ತನಕ ಎಳೆದೊಯ್ದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಹೋಂ ಗಾರ್ಡ್ ಸಿಬ್ಬಂದಿ ಸಂಗಯ್ಯ (37) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮುರಳಿ (32) ಗಂಭೀರ ಗಾಯಗೊಂಡಿದ್ದಾರೆ.

ಇನ್ನು, ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಕಾರಿನ ಮುಂಭಾಗ ಮತ್ತು ಬೈಕ್ ನಜ್ಜುಗುಜ್ಜಾಗಿದೆ. ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದಾನೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.