ಭದ್ರಾವತಿ: ಬಾಲಕಾರ್ಮಿಕರು ಮತ್ತು ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿದರು. ಈ ವೇಳೆ ಐವರು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಆಶ್ರಿತಾ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಎಲ್ಲೆಲ್ಲಿ ನಡೆಯಿತು ದಾಳಿ?
ನಗರದ ವಿವಿಧ ವಾಣಿಜ್ಯ ಸಂಸ್ಥೆಗಳು, ಗ್ಯಾರೇಜುಗಳು ಹಾಗೂ ಗ್ರಾಮೀಣ ಪ್ರದೇಶದ ಅಲೆಮಾರಿ ತಾಣಗಳಲ್ಲಿ ತಪಾಸಣೆ ನಡೆಸಲಾಯಿತು.ಈ ಸಂದರ್ಭ 3 ಬಾಲಕಾರ್ಮಿಕರು ಹಾಗೂ 2 ಕಿಶೋರ ಕಾರ್ಮಿಕರು ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ. ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆ ವೇಳೆ ಮಾಲೀಕರಿಗೆ ಕಾನೂನು ಅರಿವು ಮೂಡಿಸಲಾಗಿದೆ. ಮಕ್ಕಳ ರಕ್ಷಣೆಗೆ ಸಂಬಂಧಿಸಿದ ದೂರುಗಳಿಗಾಗಿ ಮಕ್ಕಳ ಸಹಾಯವಾಣಿ 1098 ಅಥವಾ ಕಾರ್ಮಿಕರ ಸಹಾಯವಾಣಿ 155214 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.