ಹೊಳೆಹೊನ್ನೂರು: ಮ್ಯಾಮ್ಕೋಸ್ ಸಂಸ್ಥೆಗೆ ಸೇರಿದ ಒಂದು ಕೋಟಿ ರೂಪಾಯಿ ಮೌಲ್ಯದ ಅಡಿಕೆ (Arecanut) ಲೋಡ್ ಸಹಿತ ನಾಪತ್ತೆಯಾಗಿದ್ದ ಲಾರಿಯನ್ನು ಪೊಲೀಸರು ಕೊನೆಗು ಪತ್ತೆ ಹಚ್ಚಿದ್ದಾರೆ. ಅರಣ್ಯ ಪ್ರದೇಶದಲ್ಲಿ 350 ಚೀಲ ಅಡಿಕೆ ಮತ್ತು ಲಾರಿಯನ್ನು ಸಿಕ್ಕಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ಏನಿದು ಪ್ರಕರಣ?
ಶಿವಮೊಗ್ಗದ ಬುದ್ದಾನಗರ ನಿವಾಸಿ ಹೆಚ್. ಕೃಷ್ಣಪೂಜಾರಿ ಅವರು ಭಾರತ್ ಟ್ರಾನ್ಸ್‌ಪೋರ್ಟ್ ಮೂಲಕ ಅಡಿಕೆ ಸಾಗಿಸಲು ಲಾರಿಯೊಂದನ್ನು ಬಾಡಿಗೆಗೆ ಪಡೆದಿದ್ದರು. ಮಾರ್ಚ್ 26ರ ರಾತ್ರಿ 11 ಗಂಟೆಗೆ 350 ಚೀಲ ಅಡಿಕೆಯನ್ನು ಲೋಡ್ ಮಾಡಿಕೊಂಡ ಲಾರಿ ಬೆಂಗಳೂರಿನ ಯಶವಂತಪುರಕ್ಕೆ ಹೊರಟಿತ್ತು. ಆದರೆ ನಿಗದಿತ ಸಮಯಕ್ಕೆ ಲಾರಿ ಬೆಂಗಳೂರು ತಲುಪಿರಲಿಲ್ಲ. ಇದರಿಂದ ಅನುಮಾನಗೊಂಡ ಕೃಷ್ಣಪೂಜಾರಿ ಅವರು ಲಾರಿ ಚಾಲಕ ಮುಹಿಬುಲ್ಲಾ ಖಾನ್ ಅಲಿಯಾಸ್ ಸದ್ದಾಮ್ ಎಂಬಾತನನ್ನು ಪತ್ತೆಹಚ್ಚಿ ವಿಚಾರಿಸಿದ್ದರು. ಆಗ ಆಘಾತಕಾರಿ ವಿಷಯ ತಿಳಿದು ಬಂದಿತ್ತು.


ಅಡಿಕೆ ಲಪಟಾಯಿಸಲು ನಡೆದಿತ್ತಾ ಸಂಚು?
ಚಾಲಕ ಸದ್ದಾಮ್, ಆತನ ಪರಿಚಯದ ಮೊಹಮದ್ ಗೌಸ್ ಮತ್ತು ನೌಶದ್ ಎಂಬುವವರು ಅಡಿಕೆಯನ್ನು ಲಪಟಾಯಿಸುವ ಸಂಚು ರೂಪಿಸಿದ್ದರು. ಅಡಿಕೆಯನ್ನು ಮಾರಾಟ ಮಾಡಿ ಬಂದ ಹಣವನ್ನು ಹಂಚಿಕೊಳ್ಳಲು ಯೋಜಿಸಿದ್ದರು. ಹೊಳೆಹೊನ್ನೂರು ಕೈಮರ ಬಳಿ ಅಡಿಕೆ ತುಂಬಿದ್ದ ಲಾರಿಯನ್ನು ಬೇರೆಡೆಗೆ ಸಾಗಿಸಿ ಮೋಸ ಮಾಡಲು ಯತ್ನಿಸಿದ್ದರು. ಲಾರಿ ಚಾಲಕ ಈ ವಿಷಯ ಬಾಯಿ ಬಿಟ್ಟ ಹಿನ್ನೆಲೆ ಕೃಷ್ಣಪೂಜಾರಿ ಅವರು ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು.

ಅರಣ್ಯ ಪ್ರದೇಶದಲ್ಲಿ ಲೋಡ್ ಲಾರಿ ಪತ್ತೆ
ಪೊಲೀಸ್ ಅಧೀಕ್ಷಕ ನಿಖಿಲ್.ಬಿ ಮತ್ತು ಹೆಚ್ಚುವರಿ ಎಸ್ಪಿ ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಪ್ರಕಾಶ ರಾಥೋಡ್ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇನ್ಸ್‌ಪೆಕ್ಟರ್ ಶಿವಪ್ರಸಾದ್.ಎಂ ನೇತೃತ್ವದ ವಿಶೇಷ ತಂಡ ತನಿಖೆ ನಡೆಸಿತು. ಏಪ್ರಿಲ್ 30ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕೋಡಿಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಡಿಕೆ ಸಹಿತ ಲಾರಿಯನ್ನು ಪತ್ತೆ ಹಚ್ಚಿದ್ದಾರೆ.
ದಾಳಿ ವೇಳೆ ಏನೇನೆಲ್ಲ ಸಿಕ್ತು?
- 350 ಚೀಲಗಳಲ್ಲಿದ್ದ ಒಟ್ಟು ₹1,09,36,800 ಮೌಲ್ಯದ ಅಡಿಕೆ.
- ಕೃತ್ಯಕ್ಕೆ ಬಳಸಿದ್ದ ಸುಮಾರು ₹20,00,000 ಮೌಲ್ಯದ ಲಾರಿ.
- ವಶಕ್ಕೆ ಪಡೆದ ಒಟ್ಟು ವಸ್ತುಗಳ ಮೌಲ್ಯ ₹1,29,36,800 ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ಶಾಂತಲಾ, ಸಿಬ್ಬಂದಿ ಅಣ್ಣಪ್ಪ, ಪ್ರಕಾಶ ನಾಯ್ಕ, ನಾಗರಾಜ, ಕುಬೇರನಾಯ್ಕ, ಪ್ರಶಾಂತ, ಪ್ರವೀಣ್ ಹಂಪೋಳ್, ವಿಶ್ವನಾಥ, ಜಿಲ್ಲಾ ತಾಂತ್ರಿಕ ಸಿಬ್ಬಂದಿ ಗುರುರಾಜ ಮತ್ತು ಇಂದ್ರೇಶ ಅವರ ತಂಡ ಭಾಗವಹಿಸಿತ್ತು.
ಇದನ್ನೂ ಓದಿ : ಆಯನೂರು ಸಂತೆ; ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಬಂದವರಿಂದ ಮಾಂಗಲ್ಯ ಸರ ಅಪಹರಣ