ವಾಮಾಚಾರದ ಭಯ, ಲಕ್ಷಾಂತರ ಮೌಲ್ಯದ ಆಭರಣ ದೋಚಿದ್ದ ಖದೀಮ ಕೆಲವೇ ಗಂಟೆಯಲ್ಲಿ ಅರೆಸ್ಟ್, ಆಗಿದ್ದೇನು?

ಭದ್ರಾವತಿ: ವಾಮಾಚಾರದ ಪ್ರಯೋಗವಾಗಿದೆ ಎಂದು ಮಹಿಳೆಯೊಬ್ಬರಿಗೆ ಭಯ ಹುಟ್ಟಿಸಿ ಸುಮಾರು 193 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ ₹2 ಲಕ್ಷ ಹಣ ವಂಚಿಸಿ ಕೊಂಡೊಯ್ದಿದ್ದ ಆರೋಪಿಯನ್ನು ಕೆಲವೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಗಾಂಧಿನಗರದ ಮಹಿಳೆಯೊಬ್ಬರಿಗೆ ವಾಮಾಚಾರ ಪ್ರಯೋಗವಾಗಿದೆ ಎಂದು ಮುರಳಿ ಹಾಗೂ ಆತನ ತಮ್ಮ ರವಿ ಎಂಬುವವರು ನಂಬಿಸಿದ್ದಾರೆ. ಇದನ್ನು ತೆಗೆಸದಿದ್ದರೆ ನಿಮಗೂ ಮತ್ತು ಮಕ್ಕಳಿಗೂ ಅಪಾಯ ಕಾದಿದೆ ಎಂದು ಬೆದರಿಸಿ ಮನೆಗೆ ಬಂದು ಪೂಜೆ ಮಾಡಿದ್ದಾರೆ. ನಂತರ ಪೂಜೆಯ ನೆಪದಲ್ಲಿ ಬಂಗಾರದ ಒಡವೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿ, ಮನೆಯಲ್ಲಿ ಪೂಜೆ ಮಾಡಿ ವಾಪಸ್ ನೀಡುವುದಾಗಿ ನಂಬಿಸಿ ವಂಚನೆ ಎಸಗಿದ್ದರು. ಈ ಕುರಿತು ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Gold-Recovered-from-a-thief-at-Hosamane-Police-Station-in-Bhadravathi

ಭದ್ರಾವತಿ ಉಪವಿಭಾಗದ ಡಿವೈಎಸ್‌ಪಿ ಪ್ರಕಾಶ್ ರಾಥೋಡ್, ಸಿಪಿಐ ನಾಗಮ್ಮ, ಪಿಎಸ್‌ಐ ಸಿದ್ದಪ್ಪ ಎಂ.ಪಿ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ದೂರ ದಾಖಲಾದ ಕೆಲವೇ ಗಂಟೆಯಲ್ಲಿ ತಿಪ್ಲಾಪುರ ಕ್ಯಾಂಪ್‌ನ ಮುರುಳಿ ಅಲಿಯಾಸ್ ಕರಿಯಾ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಂಧಿತ ಆರೋಪಿಯಿಂದ ಗಿರವಿ ಅಂಗಡಿಯಲ್ಲಿ ಅಡವಿಟ್ಟಿದ್ದ ಹಾಗೂ ಕರಗಿಸಿ ಗಟ್ಟಿ ಮಾಡಿಕೊಂಡು ಮನೆಯಲ್ಲಿ ಬಚ್ಚಿಟ್ಟಿದ್ದ ಒಟ್ಟು ₹22,50,000 ಮೌಲ್ಯದ 161 ಗ್ರಾಂ ಬಂಗಾರದ ಆಭರಣ ಮತ್ತು ಚಿನ್ನದ ಗಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಆದರ್ಶ ಶೆಟ್ಟಿ, ಮನ್ಸೂದ್ ಖಾನ್, ಆಸ್ಟೀನ್ ಜಾಯ್ ಫುಲ್, ಕಾಂತರಾಜ.ಬಿ.ಎನ್, ಹಣಮಂತ ಅಮಾತಿ, ಶ್ರೀಧರ ಹಾಗೂ ಸುನೀತಾ ಪಾಲ್ಗೊಂಡಿದ್ದರು.