ಭದ್ರಾವತಿ: ತಾಲ್ಲೂಕಿನ ಸೀತಾರಾಮಪುರ ಗ್ರಾಮದ ಬಳಿ ಬೈಕ್ ಪಲ್ಟಿಯಾಗಿ ಹಿಂಬದಿ ಸವಾರ (Pillion rider) ಮೃತಪಟ್ಟಿದ್ದಾರೆ. ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡ್ಲಿಗೆರೆ ಗ್ರಾಮದ ನಿವಾಸಿ ಚಿದಾನಂದ ಕೆ.ಹೆಚ್. (48) ಮೃತ ವ್ಯಕ್ತಿ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಗಂಭೀರವಾಗಿ ಗಾಯಗೊಂಡಿರುವ ಕೋಡಿಹೊಸೂರು ಗ್ರಾಮದ ನಿವಾಸಿ, ಬೈಕ್ ಚಾಲಕ ನಾಗೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರೂ ಶನಿವಾರ ಮಧ್ಯರಾತ್ರಿ ಭದ್ರಾವತಿಯಿಂದ ಕೋಡಿಹೊಸೂರು ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಸೀತಾರಾಮಪುರ ಬಳಿ ರಸ್ತೆಯ ಉಬ್ಬನ್ನು ದಾಟುವಾಗ ಚಾಲಕ ನಾಗೇಂದ್ರ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಬೈಕ್ ಪಲ್ಟಿಯಾಗಿದೆ. ತೀವ್ರವಾಗಿ ಗಾಯಗೊಂಡ ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿದಾನಂದ ಮೃತಪಟ್ಟಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ನಾಗೇಂದ್ರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.