ಭದ್ರಾವತಿ: ಬಯಲುಸೀಮೆಯ ನಾಲ್ಕು ಜಿಲ್ಲೆಗಳ ಬರಪೀಡಿತ ಹನ್ನೆರಡು ತಾಲ್ಲೂಕುಗಳ ಜನರಿಗೆ ನೆರವಾಗಲು ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ದೊರೆತಿದೆ. ಲಕ್ಕವಳ್ಳಿ ಬಳಿ ಭದ್ರಾ ಯೋಜನಾ ಪ್ರದೇಶದ (ಬಿಆರ್ಪಿ) ಶಾಂತಿಪುರದ ಬಳಿ ಭಾನುವಾರ ಕಾಲುವೆಗೆ ನೀರು ಹರಿಸಲಾಯಿತು.
ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಅಲ್ಲಿನ ಗೋನೂರು ಕೆರೆಗೆ ಪ್ರಾಯೋಗಿಕವಾಗಿ ಮೂರು ಟಿಎಂಸಿ ಅಡಿ ನೀರನ್ನು ಹರಿಸಲಾಯಿತು. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಚಾಲನೆ ನೀಡಿದರು.

ಸಚಿವ ರಘುಮೂರ್ತಿ ಏನೆಲ್ಲ ಹೇಳಿದರು?
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ರಘುಮೂರ್ತಿ, ಭದ್ರಾ ಮೇಲ್ದಂಡೆ ಯೋಜನೆಯ ತೇರು ಮುನ್ನಡೆಯಲು ಕಳೆದ ಆರು ದಶಕಗಳಿಂದ ಹೋರಾಟ ನಡೆಸಿದ ಎಲ್ಲಾ ಮಹನೀಯರಿಗೂ ಕೃತಜ್ಞತೆ ಸಲ್ಲಿಸುತ್ತೇವೆ. ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು 2002ರಲ್ಲಿ ಈ ಯೋಜನೆಗೆ ₹2,214 ಕೋಟಿ ಅನುದಾನ ನೀಡಿದ್ದರು. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಮುಖ್ಯಮಂತ್ರಿಗಳು ಈ ಯೋಜನೆ ಸಾಕಾರಗೊಳ್ಳಲು ಶ್ರಮಿಸಿದ್ದಾರೆ ಎಂದರು.
ಬರದ ವಾತಾವರಣವಿರುವ ಈ ಸಂದರ್ಭ ಪ್ರಾಯೋಗಿಕವಾಗಿ ನೀರು ಹರಿಸಲು ಅವಕಾಶ ಕಲ್ಪಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಯಲು ನಾಡಿನ ಜನರ ಪರ ನೈಜ ಕಾಳಜಿ ಮೆರೆದಿದ್ದಾರೆ ಎಂದರು.
ಯೋಜನೆಯ ಪ್ರಮುಖ ಪಾಯಿಂಟ್ಸ್

ಭದ್ರಾ ಮೇಲ್ದಂಡೆ ಯೋಜನೆಯಡಿ ಬರೋಬ್ಬರಿ 367 ಕೆರೆಗಳನ್ನು ತುಂಬಿಸುವ ಯೋಜನೆ ಇದೆ. ಇದಕ್ಕಾಗಿ ಭದ್ರಾ ಜಲಾಶಯದಿಂದ 12.9 ಟಿಎಂಸಿ ಅಡಿ ಹಾಗೂ ತುಂಗಾ ಜಲಾಶಯದಿಂದ 17 ಟಿಎಂಸಿ ಅಡಿ ಸೇರಿ ಒಟ್ಟು 29.9 ಟಿಎಂಸಿ ಅಡಿ ನೀರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಹಂಚಿಕೆ ಮಾಡಲಾಗಿದೆ.

ಈ ಯೋಜನೆಯು ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ದಾವಣಗೆರೆ ಜಿಲ್ಲೆಯ ಜಗಳೂರು, ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಹಾಗೂ ಕಡೂರು ತಾಲ್ಲೂಕುಗಳ ವ್ಯಾಪ್ತಿಯನ್ನು ಒಳಗೊಂಡಿದೆ.

ಈ ತಾಲ್ಲೂಕುಗಳ ವ್ಯಾಪ್ತಿಯ ಒಟ್ಟು 367 ಕೆರೆಗಳನ್ನು ತುಂಬಿಸುವುದರ ಜೊತೆಗೆ, ಬರೋಬ್ಬರಿ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸಲು ವಿಶ್ವೇಶ್ವರಯ್ಯ ಜಲನಿಗಮ (ವಿಜೆಎನ್ಎಲ್) ಯೋಜನೆ ಅನುಷ್ಠಾನಗೊಳಿಸುತ್ತಿದೆ.
ಕಾರ್ಯಕ್ರಮದಲ್ಲಿ ಶಿರಾ ಶಾಸಕ ಟಿ.ಬಿ. ಜಯಚಂದ್ರ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ, ಚಿತ್ರದುರ್ಗ ಶಾಸಕ ಕೆ.ಎಸ್. ವೀರೆಂದ್ರ, ತರೀಕೆರೆ ಶಾಸಕ ಜಿ.ಹೆಚ್. ಶ್ರೀನಿವಾಸ್, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತ ಸಂಘಟನೆಗಳ ಮುಖಂಡರು ಹಾಗೂ ನೀರಾವರಿ ಹೋರಾಟ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.