ಶಿವಮೊಗ್ಗ ಲೈವ್
ಭದ್ರಾವತಿ: ದನದ ಕೊಟ್ಟಿಗೆಯಲ್ಲಿ ಮೂರು ಮುಳ್ಳು ಹಂದಿಗಳ ಮೃತದೇಹಗಳು ಪತ್ತೆಯಾಗಿವೆ. ಘಟನೆ ಸಂಬಂಧ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಭದ್ರಾವತಿ ವಿಭಾಗದ ತರೀಕೆರೆ ವಲಯದ ಹುಣಸಘಟ್ಟ ಶಾಖಾ ವ್ಯಾಪ್ತಿಯ ಸಾವೆಮರಡಿ ಕಾವಲ್ ಗ್ರಾಮದ ಘಟನೆ ನಡೆದಿದೆ. ಸುರೇಶ ಎಂಬುವವರ ದನದ ಕೊಟ್ಟಿಗೆಯಲ್ಲಿ ಮುಳ್ಳು ಹಂದಿಗಳ ಮೃತದೇಹಗಳು ಪತ್ತೆಯಾಗಿದ್ದವು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಮೂರು ಮುಳ್ಳು ಹಂದಿಗಳ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.

ವಲಯ ಅರಣ್ಯಾಧಿಕಾರಿ ಹರೀಶ್ ಕೆ.ಆರ್. ನೇತೃತ್ವದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಉಮೇಶ್.ಕೆ, ಗಸ್ತು ಅರಣ್ಯ ಪಾಲಕರಾದ ಅನ್ನಪೂರ್ಣೇಶ್ವರಿ ಹೆಗ್ಗಡೆ, ಸುನಿಲ್ ಪೂಜಾರಿ ಹಾಗೂ ನೆಡುತೋಪು ಕಾವಲುಗಾರರಾದ ರಾಜು ಮತ್ತು ನಾಗರಾಜ ಉಪಸ್ಥಿತರಿದ್ದರು.