ರೈತರ ಪಾದಯಾತ್ರೆಗು ಮೊದಲೇ ಎಚ್ಚೆತ್ತ ಸರ್ಕಾರ, ಭದ್ರಾ ನಾಲೆಗಳಿಗೆ ನೀರು ಹರಿಸಲು ನಿರ್ಧಾರ, ಎಷ್ಟು ದಿನ?

ಶಿವಮೊಗ್ಗ: ರೈತರ ಪಾದಯಾತ್ರೆ ಎಚ್ಚರಿಕೆಗೆ ಮಣಿದ ಸರ್ಕಾರ ಭದ್ರಾ ಜಲಾಶಯದ ನಾಲೆಗಳಿಗೆ ಇಂದು ರಾತ್ರಿಯಿಂದ ನೀರು ಹರಿಸಲು ನಿರ್ಧರಿಸಿದೆ. ಅಲ್ಲದೆ ನಾಲೆಯಲ್ಲಿ ಹರಿದು ಬರುವ ನೀರಿನ ಬಳಕೆ ಕರಿತು ಷರತ್ತು ವಿಧಿಸಲಾಗಿದೆ.

ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಕುಡಿಯುವ ನೀರು ಸಮಸ್ಯೆ ಹಾಗೂ ಅಡಿಕೆ ತೋಟಗಳು ಒಣಗುವ ಸ್ಥಿತಿ ತಲುಪಿತ್ತು. ಈ ಸಂಬಂಧ ರೈತರು ಸರ್ಕಾರದ ಗಮನ ಸೆಳೆದಿದ್ದರು. ಸ್ಪಷ್ಟ ನಿರ್ಧಾರ ಬಾರದ ಹಿನ್ನೆಲೆ ರೈತ ಮುಖಂಡ ಕೆ.ಟಿ.ಗಂಗಾಧರ್‌ ನೇತೃತ್ವದಲ್ಲಿ ಸೆಪ್ಟೆಂಬರ್ 17 ರಂದು ಕಾಡಾ ಕಚೇರಿಯಿಂದ ಭದ್ರಾ ಜಲಾಶಯದವರೆಗೆ ಪಾದಯಾತ್ರೆ ನಡೆಸಲು ರೈತ ಸಂಘ ತೀರ್ಮಾನಿಸಿತ್ತು.

Bhadra-Dam-General-Image

ನಾಲೆಗಳಿಗೆ ನೀರು, ಷರತ್ತು ಅನ್ವಯ

ರೈತರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ಇಂದಿನಿಂದ ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ್ 2 ರವರೆಗೆ 15 ದಿನಗಳ ಕಾಲ ನಾಲೆಗಳ ನೀರು ಹರಿಸಲು ನಿರ್ಧರಿಸಿದೆ. ಭದ್ರಾ ನಾಲೆಗಳ ಮೂಲಕ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮದಿಂದ ಆದೇಶ ಹೊರಡಿಸಿದೆ.

ನಾಲೆಯ ನೀರನ್ನು ಜನ, ಜಾನುವಾರುಗಳ ಕುಡಿಯುವ ನೀರು, ಅಂತರ್ಜಲ ವೃದ್ಧಿ, ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಲು ಮಾತ್ರ ಬಳಕೆ ಮಾಡಬೇಕು. ಬೆಳೆಗಳಿಗೆ ನೀರು ಬಳಕೆ ಮಾಡುವಂತಿಲ್ಲ. ಅನಧಿಕೃತವಾಗಿ ನಾಲೆಗಳಿಂದ ನೀರೆತ್ತುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

ಪಾದಯಾತ್ರೆ ಕೈ ಬಿಟ್ಟ ರೈತರು

ಸರ್ಕಾರದ ನಿರ್ಧಾರದಿಂದ ರೈತರಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ದರಿಂದ ಪಾದಯಾತ್ರೆ ಹೋರಾಟ ವಾಪಸ್ ಪಡೆಯಲಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥೇಶ್ವರ ತಿಳಿಸಿದ್ದಾರೆ.