ಶಿವಮೊಗ್ಗದ ಜೈಲಿಗೆ ಕರೆದೊಯ್ಯುವಾಗ ಆರೋಪಿ ಎಸ್ಕೇಪ್‌, ದಾಖಲಾಯ್ತು ಕೇಸ್‌, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕಲಬುರಗಿ ಜೈಲಿನಿಂದ ಕೈದಿಗಳು ಎಸ್ಕೇಪ್‌ ಆಗಿರುವ ಪ್ರಕರಣ ಮಾಸುವ ಮುನ್ನವೆ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯವ ವೇಳೆ ಅರಣ್ಯ ಇಲಾಖೆ ಸುಪರ್ದಿಯಿಂದ ಆರೋಪಿಯೊಬ್ಬ ಪರಾರಿಯಾಗಿದ್ದಾನೆ.

ಹೊಸನಗರ: ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ ಆರೋಪಿಯೊಬ್ಬ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯ ಸುಪರ್ದಿಯಿಂದ ಮಾರ್ಗಮಧ್ಯೆ ಪರಾರಿಯಾಗಿರುವ ಘಟನೆ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ನಡೆದಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ತಾಲ್ಲೂಕಿನ ಅಡುಗೋಡಿ ಗ್ರಾಮದ ವೆಂಕಟೇಶ್ (36) ಪರಾರಿಯಾದ ಆರೋಪಿ. ಪ್ರಕರಣವೊಂದರ ಸಂಬಂಧ ವೆಂಕಟೇಶನನ್ನು ನ್ಯಾಯಾಲಯದ ವಾರಂಟ್ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಈತನನ್ನು ವಶಕ್ಕೆ ಪಡೆದಿದ್ದರು. ಆರೋಪಿಯನ್ನು ಹೊಸನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ, ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುವಂತೆ ಆದೇಶಿಸಿದ್ದರು.

BREAKING-NEWS-GENERAL-

ಊಟದ ನೆಪದಲ್ಲಿ ಎಸ್ಕೇಪ್

ನ್ಯಾಯಾಲಯದ ಆದೇಶದಂತೆ ಅರಣ್ಯ ಉಪವಲಯ ಅಧಿಕಾರಿಗಳಾದ ಸುನೀಲ್ ಡಿ. ಕುಂಬಾರ್, ಇಬ್ರಾಹಿಂ, ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಚಕ್ರಪಾಣಿ ಅವರು ಇಲಾಖಾ ವಾಹನದಲ್ಲಿ ಆರೋಪಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯುತ್ತಿದ್ದರು. ಮಧ್ಯಾಹ್ನ 2 ಗಂಟೆ‌ ಹೊತ್ತಿಗೆ ವಾಹನವು ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ತಲುಪಿದಾಗ, ತನಗೆ ಹಸಿವಾಗುತ್ತಿದೆ. ಊಟ ಕೊಡಿಸುವಂತೆ ಆರೋಪಿ ವೆಂಕಟೇಶ್ ಸಿಬ್ಬಂದಿಗೆ ತಿಳಿಸಿದ್ದ.

ಸಿಬ್ಬಂದಿಯನ್ನು ದಬ್ಬಿ ಪರಾರಿ

ಆರೋಪಿಯ ಮಾತನ್ನು ನಂಬಿದ ಅಧಿಕಾರಿಗಳಾದ ಸುನೀಲ್ ಹಾಗೂ ಇಬ್ರಾಹಿಂ ಅವರು ಜೀಪ್ ನಿಲ್ಲಿಸಿ, ಸಮೀಪದ ಸಹನಾ ಹೋಟೆಲ್‌ಗೆ ಊಟ ತರಲು ಹೋಗಿದ್ದಾರೆ. ಈ ವೇಳೆ ಜೀಪ್‌ನಲ್ಲಿ ಆರೋಪಿಯ ಕಾವಲಿಗಿದ್ದ ಅರಣ್ಯ ವೀಕ್ಷಕ ಅಯಾನ್ ಹಾಗೂ ಚಕ್ರಪಾಣಿ ಅವರನ್ನು ಜೋರಾಗಿ ತಳ್ಳಿ, ಹಲ್ಲೆ ನಡೆಸಿದ ಆರೋಪಿ ವೆಂಕಟೇಶ್ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ತಕ್ಷಣವೇ ಸಿಬ್ಬಂದಿ ಬಟ್ಟೆಮಲ್ಲಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಪಿ ವೆಂಕಟೇಶ್‌ಗಾಗಿ ಹುಡುಕಾಟ ನಡೆಸಿದರು. ಆತ ಪತ್ತೆಯಾಗಿಲ್ಲ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಹೊಸನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.