ಹೊಸನಗರ: ತಾಲ್ಲೂಕಿನ ಮಾನಸಟ್ಟೆ ಗ್ರಾಮದ ಮೂಡುಗಲ್ಲುವಿನಲ್ಲಿರುವ ಮನೆಯ ಬೀಗ ಮುರಿದು, ಸುಮಾರು ₹70 ಸಾವಿರ ಮೌಲ್ಯದ ಸಿಪ್ಪೆಗೋಟು ಅಡಿಕೆಯನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಮೂಡುಗಲ್ಲಿನ ನಿವಾಸಿ ಕೃಷ್ಣಮೂರ್ತಿ ಟಿ.ಎಂ. ಅವರು ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೇಗಾಯ್ತು ಕಳ್ಳತನ?
ಕೃಷ್ಣಮೂರ್ತಿ ಅವರು ಶಿವಮೊಗ್ಗದಲ್ಲಿ ವಾಸವಿದ್ದು, ವಾರಾಂತ್ಯದಲ್ಲಿ ಮಾತ್ರ ಗ್ರಾಮಕ್ಕೆ ಬರುತ್ತಾರೆ. ಏಪ್ರಿಲ್ 13ರ ಬೆಳಿಗ್ಗೆ 7.30ಕ್ಕೆ ಮನೆಯ ಮುಂಬಾಗಿಲಿಗೆ ಬೀಗ ಹಾಕಿ ಶಿವಮೊಗ್ಗಕ್ಕೆ ಹೋಗಿದ್ದರು. ಏಪ್ರಿಲ್ 18ರ ಸಂಜೆ 5 ಗಂಟೆಗೆ ವಾಪಸ್ ಬಂದು ನೋಡಿದಾಗ, ಮನೆಯ ಮುಂಬಾಗಿಲಿನ ಬೀಗ ಮುರಿದಿರುವುದು ಮತ್ತು ಕಿಟಕಿಯ ಗಾಜು ಒಡೆದಿರುವುದು ಗಮನಕ್ಕೆ ಬಂದಿದೆ. ಹಿಂಬದಿಯ ಬಾಗಿಲು ತೆರೆದಿದ್ದು, ಒಳಗಿನ ಕೊಠಡಿಯಲ್ಲಿದ್ದ 8 ಚೀಲಗಳಲ್ಲಿದ್ದ ಒಟ್ಟು 3 ಕ್ವಿಂಟಾಲ್ 20 ಕೆ.ಜಿ ಸಿಪ್ಪೆಗೋಟು ಅಡಿಕೆ ನಾಪತ್ತೆಯಾಗಿದ್ದವು ಎಂದು ಆರೋಪಿಸಲಾಗಿದೆ.
ಸ್ಥಳೀಯವಾಗಿ ಹಾಗೂ ಅಡಿಕೆ ಮಂಡಿಗಳಲ್ಲಿ ಹುಡುಕಾಟ ನಡೆಸಿದರೂ ಅಡಿಕೆ ಪತ್ತೆಯಾಗದ ಹಿನ್ನೆಲೆ, ತಡವಾಗಿ ದೂರು ನೀಡಿದ್ದಾರೆ. ಹೊಸನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.