SHIVAMOGGA LIVE NEWS, 3 FEBRUARY 2025
ರಿಪ್ಪನ್‌ಪೇಟೆ : ‘ನಮ್ಮೂರಿಗೆ ನಡೆದುಕೊಂಡೇ ಬನ್ನಿ. ಇಲ್ಲವಾದಲ್ಲಿ ಆಸ್ಪತ್ರೆ ಸೇರುತ್ತೀರʼ ಊರಿನ ಮುಂಭಾಗ ಗ್ರಾಮಸ್ಥರು ಹೀಗೊಂದು ಎಚ್ಚರಿಕೆ ಫಲಕ ಅಳವಡಿಸಿದ್ದಾರೆ. ಅಲ್ಲದೆ ‘ಈ ರಸ್ತೆ ಲಿಮ್ಕಾ ದಾಖಲೆ ಪುಸ್ತಕ (limca record) ಸೇರಲಿದೆ’ ಎಂದು ರಸ್ತೆಯ ದುಸ್ಥಿತಿಯನ್ನು ವ್ಯಂಗ್ಯ ಮಾಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಕಳೆದ ಹತ್ತು ವರ್ಷದಿಂದ ಗ್ರಾಮ ಪಂಚಾಯಿತಿ ಮಟ್ಟದಿಂದ ಶಾಸಕರವರೆಗೆ ಹಲವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಊರಿಗೆ ಸರಿಯಾದ ರಸ್ತೆ ನಿರ್ಮಿಸಿಲ್ಲ. ಇದರಿಂದ ಊರಿಗೆ ಯಾವ ವಾಹನಗಳು ಬರುತ್ತಿಲ್ಲ. ಬಂದ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಇಲ್ಲವೆ ಅಪಘಾತಕ್ಕೀಡಾಗಿ ವಾಹನದಲ್ಲಿದ್ದವರು ಗಾಯಗೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಊರ ಮುಂಭಾಗದಲ್ಲಿ ಇಂತಹದ್ದೊಂದು ಎಚ್ಚರಿಕೆ ಫಲಕ ಅಳವಡಿಸಿ ಅಡಳಿತಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.
ಎಚ್ಚರಿಕೆ ಫಲಕದಲ್ಲಿ ಏನೇನಿದೆ?
ತಾರಿಗ ಗ್ರಾಮಕ್ಕೆ ಬರುವವರಿಗೆ ನಿಷೇಧವಿದೆ. ಗರ್ತಿಕೆರೆಯಿಂದ ತಾರಿಗ ಗ್ರಾಮದವರೆಗೆ ರಸ್ತೆ ಗರ್ಭಿಣಿಯರು, ಮಕ್ಕಳು, ವೃದ್ಧರು, ವಾಹನ ಸವಾರರಿಗೆ ಚಲಿಸಲು ಯೋಗ್ಯವಿಲ್ಲ. ರಸ್ತೆಗೆ ಬಂದು ಬಿದ್ದು ಆಸ್ಪತ್ರೆಗೆ ಸೇರಬೇಡಿ. ಬರುವುದಾದರೆ ನಡೆದುಕೊಂಡೆ ಬನ್ನಿ. ನಮ್ಮೂರ ರಸ್ತೆ ಲಿಮ್ಕಾ ದಾಖಲೆ ಪುಸ್ತಕ ಸೇರುವ ಎಲ್ಲಾ ಸಾಧ್ಯತೆ ಇದೆ. ನಮ್ಮೂರಿಗೆ ರಸ್ತೆ ಇದೆ. ಆದರೆ ಇದು ರಸ್ತೆಯಲ್ಲ. ಇದು ಈ ಭಾಗದ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಶಾಸಕರ ಅಭಿವೃದ್ಧಿಯ ನಿರ್ಲಕ್ಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ ಹಾಕಲು ಗುರುತಿನ ಚೀಟಿ ಕೊಟ್ಟಿದ್ದಾರೆ
ಮಜಿರೆ ಗ್ರಾಮ ತಾರಿಗ ಗ್ರಾಮ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡಲಿದೆ. ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತಾರಿಗ ಗ್ರಾಮದಲ್ಲಿ ಸುಮಾರು 300 ಜನ ವಾಸವಾಗಿದ್ದಾರೆ. 50 ಮನೆಗಳಿವೆ. ಮತ ಚಲಾಯಿಸಲು ಗುರುತಿನ ಚೀಟಿ ಇರುವುದರಿಂದ ಪ್ರತಿ ಚುನಾವಣೆ ಹೊತ್ತಿಗೆ ಮಾತ್ರ ಅಭ್ಯರ್ಥಿಗಳು ಈ ಊರಿನತ್ತ ಇಣುಕಿ ಹೋಗುತ್ತಾರೆ. ಗೆದ್ದವರು, ಸೋತವರು ಮತ್ತೆ ಇತ್ತ ಸುಳಿಯುವುದಿಲ್ಲ. ಆಧಾರ್ ಕಾರ್ಡ್ ಸೇರಿ ಎಲ್ಲ ಕಾರ್ಡುಗಳನ್ನು ಸರ್ಕಾರ ವಿತರಿಸಿದೆ.
ಸ್ವಾತಂತ್ರ್ಯ ಬಂದಾಗಿನಿಂದ ಡಾಂಬಾರು ಕಂಡಿಲ್ಲ
ಗರ್ತಿಗೆರೆಯಿಂದ ಒಂದೂವರೆ ಕಿ.ಮೀ ದೂರದಲ್ಲಿದೆ ತಾರಿಗ. ಆದರೆ ಈ ರಸ್ತೆಯಲ್ಲಿರುವ ಉಬ್ಬು, ತಗ್ಗು, ಮೈ ಹಣ್ಣಾಗಿಸುವ ಗುಂಡಿಗಳ ಕಾರಣಕ್ಕೆ ಇಷ್ಟು ದೂರ ಕ್ರಮಿಸಲು ಅರ್ಧ ಗಂಟೆಗು ಹೆಚ್ಚು ಹೊತ್ತು ಬೇಕು. ಇದೇ ಕಾರಣಕ್ಕೆ ಊರಿಗೆ ರಸ್ತೆ ಬೇಕು ಎಂದು ಗ್ರಾಮಸ್ಥರು ಪಟ್ಟು ಬಿಗಿಗೊಳಿಸಿದಾಗ, 2007ರಲ್ಲಿ ಜೆಲ್ಲಿ ಹಾಸಿ, ರೋಲರ್ ಹಾಯಿಸಲಾಗಿತ್ತು. ಆ ಬಳಿಕ ಎರಡು ದಶಕವಾದರು ಈ ರಸ್ತೆ ಮತ್ತೆ ಹಿಡಿ ಮಣ್ಣನ್ನೂ ಕಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹತ್ತು ವರ್ಷದಿಂದ ಎಲ್ಲರಿಗು ಮನವಿ ಕೊಟ್ಟಿದ್ದೇವೆ. ಆದರೆ ಯಾವುದೆ ಉಪಯೋಗ ಆಗಿಲ್ಲ. ಇದರಿಂದ ಬೇಸತ್ತು ಬ್ಯಾನರ್ ಕಟ್ಟಿದ್ದೇವೆ.
ಅರುಣ್ ಜಿ.ನಾಯಕ್, ಗ್ರಾಮಸ್ಥ
ತುರ್ತು ಸಂದರ್ಭ ಆಂಬುಲೆನ್ಸ್ ಬರಲ್ಲ
ರಸ್ತೆಯ ದುಸ್ಥಿತಿಯಿಂದ ಊರಿಗೆ ಬಸ್ಸು ಬರಲ್ಲ. ಆಟೋ, ಗೂಡ್ಸ್ ವಾಹನಗಳು ಇತ್ತ ತಿರುಗಿ ನೋಡುವುದಿಲ್ಲ. ಶಾಲೆ ಮಕ್ಕಳು ನಿತ್ಯ ನಡೆದುಕೊಂಡೆ ಹೋಗಬೇಕಿದೆ. ಇನ್ನು, ತುರ್ತು ಸಂದರ್ಭ ಆಂಬುಲೆನ್ಸ್ ಕೂಡ ಈ ಊರಿಗೆ ಬರುತ್ತಿಲ್ಲ. ಹಾಗಾಗಿ ರಸ್ತೆಗಾಗಿ ಕಳೆದ ಹತ್ತು ವರ್ಷದಿಂದ ಜನ ಗ್ರಾಮ ಪಂಚಾಯಿತಿಯಿಂದ ಎಂಎಲ್‌ಎ ಮನೆ ತನಕ ಅಲೆದು ಸುಸ್ತಾಗಿದ್ದಾರೆ. ಹಾಗಾಗಿ ಆಕ್ರೋಶಗೊಂಡು ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.
ಹನಿ ನೀರು ಕಂಡಿಲ್ಲ
ಮಜಿರೆ ಗ್ರಾಮ ಎಂಬ ನೆಪ ಹೇಳಿ ರಸ್ತೆ ರಿಪೇರಿ ಮಾಡಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಆದರೆ ಉಳಿದ ಯೋಜನೆಗಳನ್ನು ಮಾತ್ರ ಸರ್ಕಾರ ಇಲ್ಲಿನ ನಿವಾಸಿಗಳ ಮನೆ ಬಾಗಿಲಿಗೆ ತಂದು ನಿಲ್ಲಿಸಿದೆ. ಕಳೆದ ವರ್ಷ ಜಲಜೀವನ್ ಮಿಷನ್ ಯೋಜನೆ ಅಡಿ ಪೈಪ್‌ಲೈನ್ ಹಾಕಿ, ನಿಮ್ಮೂರಿನ ಬಾಯಾರಿಕೆ ನೀಗಿಸುತ್ತೇವೆ. ಶುದ್ಧ ಕುಡಿಯುವ ನೀರು ಪೂರೈಸುತ್ತೇವೆ ಎಂದು ಭರವಸೆ ಇಟ್ಟು ಹೋಗಿದ್ದಾರೆ. ಆದರೆ ಈ ಪೈಪುಗಳಲ್ಲಿ ಹನಿ ನೀರು ಬಂದಿಲ್ಲ. ಈ ಊರಿನತ್ತ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇರುವ ನಿರ್ಲಕ್ಷ್ಯಕ್ಕೆ ಮತ್ತೊಂದು ಜ್ವಲಂತ ಉದಾಹರಣೆ.
ಎಲ್ಲರಂತೆ ತೆರಿಗೆ ಪಾವತಿಸುತ್ತೇವೆ. ಎಲ್ಲರಂತೆ ನಾಗರಿಕ ಕರ್ತವ್ಯ ಮೆರೆದಿದ್ದೇವೆ. ಆದರೂ ಆಡಳಿತ ತಮ್ಮನ್ನೇಕೆ ನಿರ್ಲಕ್ಷ್ಯದಿಂದ ಕಾಣುತ್ತಿದೆ ಎಂದು ತಾರಿಗದ ವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ » ತುಂಗಾ ಡ್ಯಾಂಗೆ 11 ಲಕ್ಷ ಮೀನು ಮರಿ | ಆಶ್ರಯ ಸಮಿತಿಗೆ ನೇಮಕ | ವಾಹನ ಡಿಕ್ಕಿ, ಜಿಂಕೆ ಸಾವು