ಶಿವಮೊಗ್ಗ ಲೈವ್.ಕಾಂ | ಹೊಸನಗರ | 20 ಸೆಪ್ಟೆಂಬರ್ 2019
ಮಾನದಂಡಗಳನ್ನು ನಿರ್ಲಕ್ಷಿಸಿ, ವಾಸ್ತವಾಂಶವನ್ನು ಮರೆಮಾಚಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಇದರಿಂದ ಭಾರಿ ಪ್ರಮಾಣದ ಕಾಡು ನಾಶ, ಜನಜೀವನಕ್ಕೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ತಾಲೂಕು ಕಚೇರಿ ಮುಂಭಾಗ ಕ್ಲಲು ಗಣಿಗಾರಿಕೆ ವಿರುದ್ಧ ಘೋಷಣೆ ಕೂಗಿದರು.
ಕುಂಭತ್ತಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಇದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ ಅಧಿಕಾರಿಗಳ ನಡೆ ವಿರೋಧಿಸಿ, ಜನಸಂಗ್ರಾಮ ಪರಿಷತ್ ತಾಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಾಸ್ತವಾಂಶ ಮರೆಮಾಚಿದ ಅಧಿಕಾರಿಗಳು
ಕುಂಭತ್ತಿ ಗ್ರಾಮದ ಸರ್ವೆ ನಂಬರ್ 5ರಲ್ಲಿ 78 ಎಕರೆ ಸರ್ಕಾರಿ ಜಾಗವಿದೆ. ಈ ಪೈಕಿ 1926ರಲ್ಲಿ 26 ಎಕರೆ ಜಾಗವನ್ನು ಅರಣ್ಯವೆಂದು ಘೋಷಿಸಲಾಗಿದೆ. ಕಂದಾಯ ಅಧಿಕಾರಿಗಳು ಇದನ್ನು ಪಹಣಿ ದಾಖಲೆಯಲ್ಲಿ ನಮೂದಿಸಿಲ್ಲ. ಮಾನದಂಡಗಳನ್ನು ಗಾಳಿಗೆ ತೂರಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಜನಸಂಗ್ರಾಮ ಪರಿಷತ್ ತಾಲೂಕು ಘಟಕದ ಸದಸ್ಯ ಗಿರೀಶ್ ಆಚಾರ್ ಆಪಾದಿಸಿದರು.
ಗ್ರಾಮದಲ್ಲಿ 170ಕ್ಕೂ ಹೆಚ್ಚು ಜಾನುವಾರುಗಳಿವೆ. ಕಾನೂನು ಪ್ರಕಾರ ಅವುಗಳ ಮೇವಿಗೆ ಮೀಸಲಿಡಬೇಕಾದ ಜಾಗವನ್ನು ಕಲ್ಲು ಗಣಿಗಾರಿಕೆಗೆ ನೀಡಲಾಗಿದೆ. ಉದ್ದೇಶಿತ ಕಲ್ಲು ಗಣಿಗಾರಿಕೆ ಜಾಗಕ್ಕೆ ಸಮೀಪದಲ್ಲೆ ವಸತಿ ಪ್ರದೇಶ, ಶಾಲೆ, ಕೃಷಿ ಜಮೀನು, ದೇವಸ್ಥಾನಗಳಿವೆ. ಇನ್ನು ಕಳೆದ ಎರಡು ದಿನದಿಂದ ಜೆಸಿಬಿ ಬಳಸಿ 1 ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಅರಣ್ಯಕ್ಕೆ ಹಾನಿಯಾಗಿದೆ ಎಂದು ಅವರು ಆರೋಪಿಸಿದರು.
ಗ್ರಾಮಸ್ಥರಾದ ಅಭಿಮನ್ಯು, ರವಿ ಪೂಜಾರಿ, ರಾಘು ಪೂಜಾರಿ, ಸಂಜೀದ್, ಶಾರದಾ ಸೇರಿದಂತೆ ಕುಂಭತ್ತಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200