ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 16 DECEMBER 2024
ಸಾಗರ : ಜೋಗ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ (Bus) ಪಲ್ಟಿಯಾಗಿ ಮಂಗಳೂರಿನ ಪ್ರವಾಸಿಗರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಪ್ಪಾನೆ ತಿರುವಿನಲ್ಲಿ ಭಾನುವಾರ ಘಟನೆ ನಡೆದಿದೆ.
ಅಪಘಾತದ ನಂತರ ಏನೇನಾಯ್ತು? ಇಲ್ಲಿದೆ ಪಾಯಿಂಟ್ಸ್
ದೇವರ ದರ್ಶನಕ್ಕೆ ಹೊರಟಿದ್ದರು
ಮಂಗಳೂರಿನ ಬಿ.ಸಿ. ರಸ್ತೆ ಸುತ್ತಮುತ್ತಲ 49 ಪ್ರವಾಸಿಗರು ಜೋಗ ಪ್ರವಾಸ ಕೈಗೊಂಡಿದ್ದರು. ಅಲ್ಲಿಂದ ವಡನಬೈಲು ಪದ್ಮಾವತಿ ದೇಗುಲ, ಸಿಗಂದೂರು ದೇವಸ್ಥಾನಕ್ಕೆ ತೆರಳುವವರಿದ್ದರು. ಮುಪ್ಪಾನೆ ಬಳಿ ತಿರುವಿನಲ್ಲಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಮಕ್ಕಳು, ಮಹಿಳೆಯರು ಹಲವರು ಗಾಯಗೊಂಡಿದ್ದಾರೆ. ಇಬ್ಬರ ಕೈ ತುಂಡಾಗಿದೆ.
ತಕ್ಷಣ ನೆರವಿಗೆ ಧಾವಿಸಿದ ಸ್ಥಳೀಯರು
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದ್ದರು. ಸುತ್ತಮುತ್ತಲ ನಿವಾಸಿಗಳು ಗಾಯಾಳುಗಳನ್ನು ಬಸ್ಸಿನಿಂದ ಹೊರ ತೆಗೆದಿದ್ದಾರೆ. ಅಪಘಾತವಾದ ಸ್ಥಳದಲ್ಲಿ ನೆಟ್ವರ್ಕ್ ಸಿಗುವುದಿಲ್ಲ. ಹಾಗಿದ್ದೂ ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಮಾಹಿತಿ ರವಾನಿಸಿದ್ದರು. ಖಾಸಗಿ ವಾಹನಗಳು, ಆಂಬುಲೆನ್ಸ್ಗಳ ಮೂಲಕ ಕಾರ್ಗಲ್ ಆಸ್ಪತ್ರೆ ಮತ್ತು ಸಾಗರ ಉಪ ವಿಭಾಗೀಯ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. ಗಾಯಳುಗಳಿಗೆ ಧೈರ್ಯ ಹೇಳಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಮಂಗಳೂರಿನಿಂದ ಪದ್ಮಾವತಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಒಟ್ಟು 49 ಪ್ರವಾಸಿಗರಿದ್ದೆವು. ಅಪಘಾತ ಸ್ಥಳದಲ್ಲಿ ಗ್ರಾಮಸ್ಥರು ತುಂಬಾ ನೆರವು ನೀಡಿದರು. ಶಾಸಕರು, ವೈದ್ಯರು, ಆಂಬುಲೆನ್ಸ್ ಸಿಬ್ಬಂದಿ, ಜನರ ಸಹಕಾರ ದೊರೆತಿದೆ.
– ಸಾಯಿ ಸೂರಜ್, ಪ್ರವಾಸಿಗ
ತುರ್ತು ಚಿಕಿತ್ಸೆ ನೀಡಿದ ಸಿಬ್ಬಂದಿ
ಕಾರ್ಗಲ್ ಮತ್ತು ಸಾಗರದ ಆಸ್ಪತ್ರೆಗಳಲ್ಲು ಗಾಯಾಳುಗಳಿಗೆ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿ ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ರವಾನಿಸಿದರು. ಇತ್ತ ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸಾರ್ವಜನಿಕರು ನೆರವಿಗೆ ಧಾವಿಸಿದರು. ತುರ್ತು ಚಿಕಿತ್ಸೆ ನೀಡಿದರು.
ಆಸ್ಪತ್ರೆಗೆ ಎಂಎಲ್ಎ ದೌಡು
ಇನ್ನು, ವಿಷಯ ತಿಳಿಯುತ್ತಿದ್ದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಆಸ್ಪತ್ರೆಗೆ ದೌಡಾಯಿಸಿದರು. ನರ್ಸಿಂಗ್ ಸಿಬ್ಬಂದಿಯಂತೆ ವೈದ್ಯರಿಗೆ ನೆರವಾದರು. ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ಹೇಳಿದರು. ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗಾಯಾಳುಗಳ ಪರಿಸ್ಥಿತಿ ಗಮನಿಸಿದಾಗ ಬೇಜಾರಾಗುತ್ತದೆ. ಎಲ್ಲರು ಗುಣಮುಖರಾಗಲಿ. ಗಾಯಾಳುಗಳಿಗೆ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ದೊರೆಯುವಲ್ಲಿ ಜನರು, ಸ್ವಯಂ ಸೇವಕರು, ಆಂಬುಲೆನ್ಸ್ ಸಿಬ್ಬಂದಿ, ವೈದ್ಯರೆಲ್ಲರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ.
– ಬೇಳೂರು ಗೋಪಾಲಕೃಷ್ಣ, ಶಾಸಕ
ಬಸ್ ತೆರವು ಕಾರ್ಯಾಚರಣೆ
ಇನ್ನು, ಬಸ್ ರಸ್ತೆ ಮಧ್ಯೆ ಪಲ್ಟಿಯಾಗಿದ್ದರಿಂದ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಜೆಸಿಬಿ ತರಿಸಿ ಬಸ್ ಮೇಲೆತ್ತಲಾಯಿತು. ಕಾರ್ಗಲ್ ಠಾಣೆಯ ಪಿಎಸ್ಐ ಹೊಳೆಬಸಪ್ಪ ಹೊಳಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ನೆರವಾದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಧೂಳು ಹಿಡಿಯುತ್ತಿದೆ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ, ಏನೆಲ್ಲ ಸಮಸ್ಯೆ ಆಗ್ತಿದೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422