ಸಿದ್ದಾಪುರ: ಜೋಗ ಜಲಪಾತದ ನಿಷೇಧಿತ ಹಾಗೂ ಪ್ರಪಾತದ ಅಪಾಯಕಾರಿ ವಲಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಸಾಮಾಜಿಕ ಜಾಲತಾಣಕ್ಕಾಗಿ ವಿಡಿಯೊ ಚಿತ್ರೀಕರಣ ನಡೆಸಿದ ತೀರ್ಥಹಳ್ಳಿಯ ಮೂವರು ಯೂಟ್ಯೂಬರ್‌ಗಳ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿ ಮೂಲದ ಯೂಟ್ಯೂಬರ್ ಮೋಹನ ಶುಭಕರ ಗೌಡ (26), ಭರತ ಗೌಡ (27) ಹಾಗೂ ಮದನ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮೂವರು ಯುವಕರು ಸಿದ್ದಾಪುರ ತಾಲೂಕು ವ್ಯಾಪ್ತಿಯ ಜೋಗ ಜಲಪಾತದ ರಾಜಾ ಫಾಲ್ಸ್‌ನ ಕಲ್ಲುಬಂಡೆಯ ತುದಿಗೆ ಇಳಿದಿದ್ದರು. ಅಲ್ಲಿಂದ ಜಲಪಾತದ ಆಳ ಹಾಗೂ ಪ್ರಪಾತದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು. ಈ ವಿಡಿಯೊವನ್ನು ಜೂನ್ 28ರಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿತ್ತು.
ಸಿದ್ದಾಪುರ ಠಾಣೆಯ ಸಾಮಾಜಿಕ ಜಾಲತಾಣ ನಿಗಾ ಘಟಕದ ಸಿಬ್ಬಂದಿ ಈ ವಿಡಿಯೊವನ್ನು ಗಮನಿಸಿದ್ದರು. ಎಚ್ಚರಿಕೆ ಫಲಕ ಅಳವಡಿಸಿದ್ದರೂ ನಿಯಮ ಉಲ್ಲಂಘಿಸಿ ಪ್ರಾಣಕ್ಕೆ ಕುತ್ತು ತರುವಂತೆ ನಡೆದುಕೊಂಡಿರುವುದು ಮತ್ತು ಇದನ್ನು ನೋಡಿ ಇತರೆ ಪ್ರವಾಸಿಗರೂ ಪ್ರೇರೇಪಿತರಾಗುವ ಸಾಧ್ಯತೆ ಇರುವುದರಿಂದ ಸ್ವಯಂ ಪ್ರೇರಿತ ದೂರು ದಾಖಲಿಕೊಳ್ಳಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.