ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 6 JANUARY 2025
ಸಾಗರ : ಕನ್ನಡದ ಹಿರಿಯ ಸಾಹಿತಿ ನಾ.ಡಿಸೋಜ ನಿಧನಕ್ಕೆ ರಾಜಕಾರಣಿಗಳು, ಸಾಹಿತಿಗಳು, ಸಾರ್ವಜನಿಕರುಗೆ ಕಂಬಿನಿ (Condolence) ಮಿಡಿದಿದ್ದಾರೆ. ನಾ.ಡಿಸೋಜ ಅವರು ಬರಹಗಳು ಮೂಲಕ ಜನಜಾಗೃತಿ ಮೂಡಿಸಿದ ಬಗೆಯನ್ನು ಸ್ಮರಿಸಿಕೊಂಡಿದ್ದಾರೆ. ಯಾರೆಲ್ಲ ಸಂತಾಪ ಸೂಚಿಸಿದ್ದಾರೆ? ಇಲ್ಲಿದೆ ಕೆಲವು ಪ್ರಮುಖರ ಸಂತಾಪ ಸಂದೇಶ.
ನಾಡಿನ ಹಿರಿಯ ಸಾಹಿತಿ ನಾ.ಡಿಸೋಜಾ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜೊತೆಯಲ್ಲಿ ಪರಿಸರ ರಕ್ಷಣೆಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಾ.ಡಿಸೋಜಾ ಅವರು ಜನಪರ ಕಾಳಜಿಯ ಲೇಖಕ. ಸಿದ್ದರಾಮಯ್ಯ, ಮುಖ್ಯಮಂತ್ರಿ
ನಾಡಿನ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ನಾ ಡಿಸೋಜ ಅವರು ನಿಧನ ಹೊಂದಿರುವ ಸುದ್ಧಿ, ಅತ್ಯಂತ ದುಖಃಕರ ಸಂಗತಿ. ಮುಳುಗಡೆ ಸಂತೃಸ್ತರ ಧ್ವನಿಯಾಗಿದ್ದ ಮುಳುಗಡೆ, ಕೊಳಗ ಮುಂತಾದ ಕಾದಂಬರಿಗಳನ್ನು ಕೊಟ್ಟ ಹಿರಿಯ ಸಾಹಿತಿ ಡಾ. ನಾ. ಡಿಸೋಜ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಸರಳ ಸಜ್ಜನಿಕೆಯ ಬಹುಮುಖ ಪ್ರತಿಭೆ, ಕನ್ನಡ ನಾಡು ಕಂಡ ಅಪರೂಪದ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಮೃತರಾಗಿದ್ದ ಹಿರಿಯ ಸಾಹಿತಿ ನಾ. ಡಿಸೋಜಾ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಃಖವಾಯಿತು. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ನಾ ಡಿಸೋಜಾ ಅವರು ಕನ್ನಡ ನಾಡು ಕಂಡ ಅಪರೂಪದ ಸಾಹಿತಿಯಾಗಿದ್ದರು. ಮಲೆನಾಡಿನ ಸೊಬಗನ್ನು ಮೈಗೂಡಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಶೈಲಿಯಿಂದ ಸರ್ವಜನರ ಹೃದಯವನ್ನು ತಟ್ಟಿ ಸಾಹಿತ್ಯ ಪ್ರೇಮಿಗಳಿಗೆ ಹಾಗೂ ಸಾಹಿತ್ಯದ ವಿದ್ಯಾರ್ಥಿಗಳಿಗೆ ಆದರ್ಶದ ಬೆಳಕಾಗಿದ್ದ ಅವರು ಜಾತಿ, ಮತ, ಧರ್ಮದ ಎಲ್ಲೆಯನ್ನು ಮೀರಿದ ಕನ್ನಡ ವಾಗ್ದೇವಿಯ ಸುಪುತ್ರರಾಗಿದ್ದರು. ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಮಲೆನಾಡಿನ ಸೊಬಗು, ಸಂಸ್ಕೃತಿಗಳಿಗೆ ಅಕ್ಷರ ರೂಪ ನೀಡುತ್ತಿದ್ದ ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ನಾ ಡಿಸೋಜ ಅವರ ನಿಧನದ ಸುದ್ದಿ ತಿಳಿದು ಆಘಾತವಾಗಿದೆ. ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಶಾಸಕ
ಖ್ಯಾತ ಸಾಹಿತಿಗಳು ನಾ ಡಿಸೋಜ ಇಂದು ರಾತ್ರಿ ಎಂಟು ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಎಂದು ತಿಳಿದು ದುಃಖ ಆಯ್ತು. ಕನ್ನಡ ಸಾಹಿತ್ಯಕ್ಕೆ ಇದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮಂಜಮ್ಮ ಜೋಗತಿ, ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ
‘ಮುಳುಗಡೆಯ ಊರಿಗೆ ಬಂದವರು’ ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಸಂದಿತ್ತು. ‘ದ್ವೀಪ’ ಮತ್ತು ‘ಕಾಡಿನ ಬೆಂಕಿ’ ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರಿಯ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿತ್ತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ರಾಜ್ಯ ಜೆಡಿಎಸ್ ಘಟಕ
ನಮ್ಮ ಕನ್ನಡ ನಾಡಿನ ನಾಡಿ ಎಂದೇ ಪ್ರಸಿದ್ಧರಾದ ನಮ್ಮ ಸಾಗರದ ಹೆಮ್ಮೆಯ ಕವಿ, ಲೇಖಕರು, ವಿಮರ್ಶಕಾರರು ಹಾಗೂ ನಮ್ಮೆಲ್ಲರ ಮಾರ್ಗದರ್ಶಕರು ಸದಾ ಹಸನ್ಮುಖಿ ಹಾಗೂ ಕನ್ನಡ ನಾಡು ಕಂಡ ಧೀಮಂತ ಲೇಖಕ ಶಕ್ತಿ ಡಾ. ನಾ ಡಿಸೋಜ ಇನ್ನು ನೆನಪು ಮಾತ್ರ. ಶ್ರೀಯುತರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಹರತಾಳು ಹಾಲಪ್ಪ, ಮಾಜಿ ಸಚಿವ
ಸಮಾಜಮುಖಿ ಚಿಂತಕರು, ಅಪಾರ ಪರಿಸರ ಕಾಳಜಿಯ ಹಿರಿಯ ಸಾಹಿತಿ ಡಾ. ನಾ. ಡಿಸೋಜ ಅವರ ನಿಧನ ಆಘಾತಕಾರಿ. ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಪುರಸ್ಕೃತರಾದ, ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ. ಡಿಸೋಜ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ರಾಜ್ಯ ಕಾಂಗ್ರೆಸ್ ಘಟಕ
ಇದನ್ನೂ ಓದಿ » ನಾ.ಡಿಸೋಜ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಳ್ಳಲು ಕಾರಣ ಆ ಎರಡು ಘಟ್ಟ, ಯಾವುದದು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422