ಸಾಗರ: ರೈತರ ಬೇಡಿಕೆಗಳಿಗೆ ಸ್ಪಂದಿಸದ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ರೈತ ಸಂಘ ನೀಡಿದ ಕರೆಯ ಮೇರೆಗೆ ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 206ರ ಜೋಗ ರಸ್ತೆಯ ಪೊಲೀಸ್ ಠಾಣೆ ಸಮೀಪ ರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರಮೇಶ್ ಈ. ಕೆಳದಿ ಮಾತನಾಡಿದರು. ಅವರು ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್.


ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿ ರೈತರ ಬೇಡಿಕೆಗಳ ಕುರಿತು ಚರ್ಚಿಸಲು ಸೋಮವಾರ ಕೇಂದ್ರ ಸರ್ಕಾರ ರೈತ ಮುಖಂಡರ ಸಭೆ ಕರೆದಿತ್ತು. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪ್ರಲ್ಟಾದ ಜೋಶಿ ಅವರೊಂದಿಗೆ ಸುಮಾರು ಮೂರೂವರೆ ಗಂಟೆಗಳ ಕಾಲ ಸಭೆ ನಡೆದರೂ ಯಾವುದೇ ಬೇಡಿಕೆ ಈಡೇರಿಸದೆ ಮತ್ತಷ್ಟು ಕಾಲಾವಕಾಶ ಕೋರಿದ್ದಾರೆ. ಈ ನಡೆಯನ್ನ ರೈತ ಸಂಘ ಖಂಡಿಸುತ್ತದೆ.

ಹುಬ್ಬಳ್ಳಿ- ಧಾರವಾಡದಲ್ಲಿ ಮೂರು ಲಕ್ಷಕ್ಕೂ ಅಧಿಕ ರೈತರು ಪ್ರತಿಭಟನೆ ನಡೆಸಿ, ಕೇಂದ್ರ ಸಚಿವ ಪ್ರಲಾದ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಿದ್ದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ರೈತ ಮುಖಂಡರನ್ನು ಮಾತುಕತೆಗೆ ದಿಲ್ಲಿಗೆ ಆಹ್ವಾನಿಸಿತ್ತು. ಆದರೆ, ಸಭೆಯಲ್ಲೂ ಬೇಡಿಕೆಗಳನ್ನು ಈಡೇರಿಸದೆ ಮತ್ತೆ ಕಾಲವಕಾಶ ಕೇಳಿದೆ.

ಕೇಂದ್ರ ಸರಕಾರದ ಧೋರಣೆ ಖಂಡಿಸಿ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರ ಕರೆಯಂತೆ ರಸ್ತೆ ತಡೆ ನಡೆಸಲಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಬುಧವಾರದಿಂದ ರಸ್ತೆ ತಡೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಸಂತೋಷ್ ಚಿಕ್ಕನೆಲ್ಲೂರು, ಚಂದ್ರಪ್ಪ ಆಲಳ್ಳಿ, ಕೃಷ್ಣಮೂರ್ತಿ, ಸೋಮಶೇಖರ ಹುತ್ತದಿಂಬ, ಶಶಿಕಲಾ, ನಾಗರಾಜ್, ಟಾಕಪ್ಪ, ವಾಸು, ಅಜ್ಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.