SAGARA NEWS, 29 OCTOBER 2024 : ಮಲೆನಾಡು ಭಾಗದ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ 9ನೇ ದಿನ ಪೂರೈಸಿದೆ. ಸತ್ಯಾಗ್ರಹ ಮತ್ತಷ್ಟು ತೀವ್ರಗೊಳಿಸುವುದಾಗಿ ರೈತರು (Farmers) ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ರೈತರೊಂದಿಗೆ ಚರ್ಚೆಗೆ ಸಮಯ ನಿಗದಿಪಡಿಸಿದೆ.
ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಹೋರಾಟ ನಡೆಸಲಾಗುತ್ತಿದೆ. ಇವತ್ತು ಹೋರಾಟ 9ನೇ ದಿನ ಪೂರ್ಣಗೊಳಿಸಿದೆ. ಈ ಸಂದರ್ಭ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡರು, ದೆಹಲಿ ಮಾದರಿ ಚಳವಳಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರವು ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ದೆಹಲಿ ಮಾದರಿ ವರ್ಷಗಟ್ಟಲೆ ಚಳವಳಿ ನಡೆಸಲಾಗುತ್ತದೆ. ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ದಿನೇಶ್ ಶಿರವಾಳ, ಜಿಲ್ಲಾಧ್ಯಕ್ಷ, ರೈತ ಸಂಘ
ರೈತರೊಂದಿಗೆ ಚರ್ಚೆಗೆ ಸಮಯ ನಿಗದಿ
ಇನ್ನೊಂದೆಡೆ ರಾಜ್ಯ ಸರ್ಕಾರ ಪ್ರತಿಭಟನಾನಿರತ ರೈತರೊಂದಿಗೆ ಚರ್ಚೆಗೆ ಸಿದ್ಧವಾಗಿದೆ. ಅ.30ರಂದು ಸಂಜೆ 4 ಗಂಟೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 313ರಲ್ಲಿ ಸಭೆ ನಿಗದಿಯಾಗಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಾಗರ ಉಪ ವಿಭಾಗಾಧಿಕಾರಿ ಮೂಲಕ ಪ್ರತಿಭಟನಾನಿರತ ರೈತರಿಗೆ ಸಭಾ ಸೂಚನಾ ಪತ್ರ ತಲುಪಿಸಲಾಗಿದೆ.
ಇದನ್ನೂ ಓದಿ » ಲಿಂಗನಮಕ್ಕಿ ಚಲೋ, ಸಾಗರದಿಂದ ಆರಂಭವಾದ ಪಾದಯಾತ್ರೆ
ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ, ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ, ಭದ್ರಾವತಿ, ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿವಮೊಗ್ಗ ಮತ್ತು ಸಾಗರ ಉಪ ವಿಭಾಗಗಳ ಸಹಾಯಕ ಆಯುಕ್ತರು ಸಭೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ » ಲಿಂಗನಮಕ್ಕಿ ಚಲೋ, ಕಾರ್ಗಲ್ನಲ್ಲಿ ರೈತರು ಪೊಲೀಸ್ ವಶಕ್ಕೆ