ಸಾಗರ: ನಗರದ ಹೋಟೆಲ್ (hotel) ಒಂದರಲ್ಲಿ ಮಾಲೀಕನೇ ತನ್ನ ಹೆಡ್ ಕುಕ್‌ನನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ : ಸಾಗರ ಮಾರಿಕಾಂಬಾ ದೇವಿ ಮೆರವಣಿಗೆ ನೋಡಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಆಘಾತ

ಬಿಹಾರ ಮೂಲದ ಟಿಂಕು ಶರ್ಮ (28) ಕೊಲೆಯಾದ ದುರ್ದೈವಿ. ಸಾಗರ ನಗರದ ಶಿವಮೊಗ್ಗ ರಸ್ತೆಯಲ್ಲಿರುವ, ಪ್ರಥಮ ದರ್ಜೆ ಕಾಲೇಜು ಎದುರಿನ ರೂಫ್ ಟಾಪ್ ಕೆಫೆ ಮತ್ತು ಗೇಮ್ ಜೋನ್‌ನಲ್ಲಿ ಕೃತ್ಯ ನಡೆದಿದೆ. ಹೋಟೆಲ್ ಮಾಲೀಕ ಇಮ್ರಾನ್ (34) ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಹೋಟೆಲ್‌ನ ಹಣಕಾಸು ವ್ಯವಹಾರ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿರುವ ಶಂಕೆ ಇದೆ. ಈ ವೇಳೆ ಕೆರಳಿದ ಇಮ್ರಾನ್, ಸ್ನೂಕರ್ ಸ್ಟಿಕ್‌ನಿಂದ ಹೊಡೆದು ಟಿಂಕು ಶರ್ಮನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಕಾರಿನಲ್ಲಿ ಮೃತದೇಹ ಸಾಗಿಸುವ ವೇಳೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಕೂಡಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಭದ್ರಾವತಿಯ ಇಬ್ಬರಿಗೆ 10 ವರ್ಷ ಜೈಲು, ₹2.23 ಲಕ್ಷ ದಂಡ, ಕಾರಣವೇನು?
