ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಸೆಪ್ಟಂಬರ್ 2020
ವಿಶ್ವ ವಿಖ್ಯಾತ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ 120 ಕೋಟಿ ರೂ. ಅನುಮೋದನೆ ನೀಡಿದ್ದು, ಎಲ್ಲಾ ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಬೇಕಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜೋಗ ಅಭಿವೃದ್ಧಿಗೆ ನೀಲ ನಕಾಶೆ ರೂಪಿಸುವ ಕುರಿತು ಜೋಗದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
https://www.facebook.com/BYRBJP/videos/624208278236909/?t=4
ಜೋಗದಲ್ಲಿ ಪ್ರವಾಸಿಗರು ಇಡೀ ದಿನ ರಜಾದಿನ ಆಸ್ವಾದಿಸಲು ಅವಕಾಶ ಕಲ್ಪಿಸಬೇಕಾಗಿದೆ. ಈಗಿರುವ ಸೌಲಭ್ಯಗಳನ್ನು ಉತ್ತಮಪಡಿಸುವ ಜತೆಗೆ ಇನ್ನಷ್ಟು ಹೊಸ ಮೂಲಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮಾತ್ರವಲ್ಲದೆ ಕೆಪಿಟಿಸಿಎಲ್ ಪಾತ್ರವೂ ಬಹಳ ಮುಖ್ಯವಾಗಿದೆ. ಜೋಗ ಅಭಿವೃದ್ಧಿ ನಿಟ್ಟಿನಲ್ಲಿ ಇದು ಎರಡನೇ ಸಭೆಯಾಗಿದ್ದು, ತಜ್ಞರ ಸಲಹೆಗಳನ್ನು ಪಡೆದು ಆದಷ್ಟು ಬೇಗನೆ ನೀಲ ನಕಾಶೆ ಅಂತಿಮಗೊಳಿಸಿ ಟೆಂಡರ್ ಕರೆಯುವ ಪ್ರಕ್ರಿಯೆಯನ್ನು ಆರಂಭಿಸಬೇಕಾಗಿದೆ ಎಂದು ಅವರು ಹೇಳಿದರು.
ಇಲ್ಲಿನ 22 ಎಕರೆ ಪ್ರದೇಶದಲ್ಲಿ ವೀಕ್ಷಣಾ ಗೋಪುರ, ಕಾರಂಜಿಗಳ ನಿರ್ಮಾಣ, ವಿಶ್ರಾಂತಿ ಗೃಹಗಳು, ಉದ್ಯಾನವನ, ವಿದ್ಯುದಾಗಾರಕ್ಕೆ ಪ್ರವಾಸಿಗರಿಗೆ ವೀಕ್ಷಣಾ ಅವಕಾಶ, ಮಳೆಗಾಲ ಹೊರತುಪಡಿಸಿ ಪ್ರತಿ ಶನಿವಾರ ಮತ್ತು ಭಾನುವಾರ ಲಿಂಗನಮಕ್ಕಿ ಜಲಾಶಯದಿಂದ ಜೋಗ ಜಲಪಾತಕ್ಕೆ ನೀರು ಹರಿಸುವುದು, ದೂರದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಿ ಅಲ್ಲಿಂದ ಪ್ರವಾಸಿಗರನ್ನು ಕರೆ ತರುವುದು ಸೇರಿದಂತೆ ಹಲವು ಪ್ರಸ್ತಾವನೆಗಳಿಗೆ ಅಂತಿಮ ರೂಪು ನೀಡಬೇಕಾಗಿದೆ ಎಂದು ಹೇಳಿದರು.
ಜೋಗ ಜಲಪಾತ ವೀಕ್ಷಣಾ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮೂರು ಹಂತಗಳಲ್ಲಿ ಏಕಕಾಲಕ್ಕೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ಜಲಪಾತದಲ್ಲಿ ರೋಪ್ ವೇ ಅಳವಡಿಸುವುದು, ಶರಾವತಿ ಹಿನ್ನೀರಿನಲ್ಲಿ ಸಾಹಸ ಕ್ರೀಡಾ ಚಟುವಟಿಕೆ, ಆಂಪಿ ಥಿಯೇಟರ್, ಮುಖ್ಯರಸ್ತೆ ಮತ್ತು ಒಳರಸ್ತೆಗಳ ಅಭಿವೃದ್ಧಿ, ಕೆಫೆಟೇರಿಯಾ, ಲ್ಯಾಂಡ್ ಸ್ಕೇಪಿಂಗ್, ಮೋನೋ ರೈಲು ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳ ಅನುಷ್ಟಾನ ಉದ್ದೇಶಿಸಲಾಗಿದೆ ಎಂದರು.
ಕೆಪಿಟಿಸಿಲ್ ಮ್ಯಾನೇಜಿಂಗ್ ಡೈರೆಕ್ಟರ್ ಪೊನ್ನುರಾಜ್ ಅವರು ಮಾತನಾಡಿ, ಜೋಗದಲ್ಲಿ ಕೆಪಿಟಿಸಿಎಲ್‍ಗೆ ಸೇರಿದ ಹಲವು ಆಸ್ತಿಪಾಸ್ತಿಗಳಿವೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಪವರ್ ಸ್ಟೇಷನ್, ಆಸ್ಪತ್ರೆ ಇತ್ಯಾದಿ ಕಟ್ಟಡಗಳನ್ನು ಬಳಸಿಕೊಳ್ಳಬಹುದಾಗಿದ್ದು, ಕೆಪಿಟಿಸಿಎಲ್ ಎಲ್ಲಾ ಸಹಕಾರ ನೀಡಲಿದೆ ಎಂದು ಹೇಳಿದರು.
ಜಂಗಲ್ ಲಾಡ್ಜಸ್ ಎಂಡಿ ವಿಜಯ್ ಶರ್ಮಾ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಮೇಶ್, ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳಾದ ರಾಜಪ್ಪ, ರವಿ, ಪ್ರವಾಸೋದ್ಯಮ ಟಾಸ್ಕ್‍ಫೋರ್ಸ್ ಸದಸ್ಯ ಲಕ್ಷ್ಮೀನಾರಾಯಣ ಕಾಶಿ ಮತ್ತಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]