SHIVAMOGGA LIVE NEWS | 3 JUNE 2024
SAGARA : ಹೆಸರಾಂತ ಇತಿಹಾಸ ಸಂಶೋಧಕ ಡಾ. ಕೆಳದಿ ಗುಂಡಾ ಜೋಯಿಸ್ (94) ನಿಧನರಾಗಿದ್ದಾರೆ. ಅವರಿಗೆ ಪುತ್ರಿ, ಪುತ್ರ ಇದ್ದಾರೆ. ಸಾಗರದ ಅಣಲೇಕೊಪ್ಪ ಬಡಾವಣೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾರಿಕಾಂಬಾ ಚಿತಾಗಾರದಲ್ಲಿ ನೆರವೇರಿಸಲಾಗುತ್ತದೆ.
ಇಲ್ಲಿದೆ 5 ಪ್ರಮುಖಾಂಶ
1931ರ ಸೆಪ್ಟೆಂಬರ್27ರಂದು ಕೆಳದಿಯ ನಂಜುಂಡ ಜೋಯಿಸಿರು, ಮೂಕಾಂಬಿಕಮ್ಮ ದಂಪತಿಗೆ ಜನಿಸಿದರು. 17ನೆಯ ವಯಸ್ಸಿನಿಂದಲೇ ಕೆಳದಿಯ ಇತಿಹಾಸದ ಸಂಶೋಧನೆ ಆರಂಭಿಸಿದರು. 1960ರಲ್ಲಿ ತಮ್ಮ ಮನೆಯಲ್ಲಿಯೇ ಐತಿಹಾಸಿಕ ವಸ್ತು ಸಂಗ್ರಹಾಲಯ ಪ್ರಾರಂಭಿಸಿದರು. 1989ರ. ನಂತರ ಅದನ್ನು ಸರ್ಕಾರಕ್ಕೆ ಒಪ್ಪಿಸಿದರು. ಹುಬ್ಬಳ್ಳಿಯ ಮೂರುಸಾವಿರ ಮಠದ ಪ್ರಾಚೀನ ಓಲೆಗರಿ ಹಸ್ತಪ್ರತಿ ಸೂಚಿಯನ್ನು ತಯಾರಿಸಿಕೊಟ್ಟಿದ್ದರು.
ಗುಂಡಾ ಜೋಯೀಸರು (Gunda Jois) ಹಳೆಯ ಕಾಲದ ಮೋಡಿ ಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ತಜ್ಞರಲ್ಲಿ ಒಬ್ಬರಾಗಿದ್ದರು. ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರಾಗಿದ್ದರು. ನಿಷ್ಕಳಂಕಿಣಿ ಕೆಳದಿ ವೀರಮ್ಮಾಜಿ, ಕೆಟಲಾಗ್ ಆಫ್ ಏನ್ಸಿಯಂಟ್ ತಿಗಳಾರಿ ಪಾಮ್‌ಲೀಫ್, ಇತಿಹಾಸ ವೈಭವ, ಕೆಳದಿಯ ಸಂಕ್ಷಿಪ್ತ ಇತಿಹಾಸ, ಇಕ್ಕೇರಿ ಅರಸರು, ಬಿದನೂರಿನ ಕೆಳದಿ ನಾಯಕರು, ಕೆಳದಿಯ ವೆಂಕಣ್ಣಯ್ಯ ಕವಿಯ ಕೀರ್ತನೆಗಳು, ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಕೆಳದಿ ಅರಸರು ಮೊದಲಾದ 30ಕ್ಕೂ ಹೆಚ್ಚು ಇತಿಹಾಸ ಸಂಶೋಧನೆಯ ಕೃತಿ, 250ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ, ಲೇಖನಗಳನ್ನು ಪ್ರಕಟಿಸಿದ್ದಾರೆ.
50ನೆಯ ವಯಸ್ಸಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ತೆರಪಿನ ಶಿಕ್ಷಣದ ಮೂಲಕ ಎಂಎ (ಇತಿಹಾಸ) ಪದವಿ ಪಡೆದರು. ಶಿವಮೊಗ್ಗದ ಸರ್ಕಾರಿ ವಸ್ತು ಸಂಗ್ರಹಾಲಯದ ಸರ್ವೇಕ್ಷಣಾಧಿಕಾರಿಯಾಗಿ, ಗೋವಾ ಪರ್ತಗಾಳಿ ಮಠದಲ್ಲಿ ಸಂಶೋಧನೆ ನಡೆಸಲು ರಾಜ್ಯದಿಂದ ನಿಯುಕ್ತರಾಗಿ, ತಮಿಳುನಾಡಿಗೆ ಸರ್ಕಾರದ ಸಾಂಸ್ಕೃತಿಕ ನಿಯೋಗಿಯಾಗಿ, ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಉಪನ್ಯಾಸಕರಾಗಿ, ರಾಜ್ಯದ ಚಾರಿತ್ರಿಕ ಸರ್ವೇಕ್ಷಣ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ ಪರೀಕ್ಷಕರಾಗಿ, ಕೆಳದಿ ದೇವಾಲಯದ ಉಚ್ಛಾಧಿಕಾರಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.
1962 ರಿಂದ 1975ರವರೆಗೆ ಮೈಸೂರು ಹಾಗೂ ಧಾರವಾಡ ವಿವಿಯಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ, 1980 ರಿಂದ 1985ರವರೆಗೆ ಕರ್ನಾಟಕ ಇತಿಹಾಸ ಕರ್ನಾಟಕ ಇತಿಹಾಸ ದಾಖಲೆ ಸಂಶೋಧನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಗುಂಡಾ ಜೋಯಿಸ್ ಅವರಿಗೆ ಹಲವು ಪ್ರಶಸ್ತಿ, ಪುರಸ್ಕಾರ ಲಭಿಸಿದೆ. ಕರ್ನಾಟಕ ಇತಿಹಾಸ ಅಕಾಡೆಮಿ, ಶಿವಮೊಗ್ಗ ಪುರಾತತ್ವ ಇಲಾಖೆ, ಮೋಡಿ ಲಿಪಿ ಸಮ್ಮೇಳನ, ಕನ್ನಡ ವಿಶ್ವವಿದ್ಯಾಲಯ, ಭಾರತ ಸರ್ಕಾರದ ಹಸ್ತಪ್ರತಿ ಸಂಪನ್ಮೂಲ ಕೇಂದ್ರ, ಕರ್ನಾಟಕ ದ್ವಿತೀಯ ಹಸ್ತಪ್ರತಿ ಸಮ್ಮೇಳನ ಹಾಗೂ ಗುಡಿಗಾರ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1994), ವಿಶ್ವ ಸರ್ಕಾರಿ ಹಿರಿಯ ನಾಗರಿಕ ಪ್ರಶಸ್ತಿ(2008), ಸಂದೇಶ ಪ್ರಶಸ್ತಿ, ಸಂಶೋಧನ ರತ್ನ ಪ್ರಶಸ್ತಿ, ಶಂಭಾ ಜೋಶಿ ಸಂಶೋಧನಾ ಪ್ರಶಸ್ತಿ, ತಾಡಪತ್ರ ಗ್ರಂಥಾರಾಧಕ ತಜ್ಞ ಪ್ರಶಸ್ತಿ, ತಾಡಪತ್ರ ಗ್ರಂಥ ಪ್ರಶಸ್ತಿಗಳು ಇವರಿಗೆ ಸಂದಿವೆ. 2022ರಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200